

ಬೆಂಗಳೂರು: ಕ್ರಮಬದ್ಧವಲ್ಲದ ಆಸ್ತಿಗಳು, ದಾಖಲೆ ಇಲ್ಲದೆ ಅನುಭವದಲ್ಲಿ ಬಂದಿರುವ ಆಸ್ತಿಗಳು, ಈಗಾಗಲೇ ಪಂಚಾಯಿತಿಯಿಂದ ಹಕ್ಕುಪತ್ರ ಕೊಟ್ಟಿರುವ ಆಸ್ತಿಗಳು, ಸರ್ಕಾರಿ ಜಾಗ, ಕೃಷಿ ಭೂಮಿಯಲ್ಲಿ ಕಟ್ಟಿಕೊಂಡಿರುವ ಮನೆ/ನಿವೇಶನಗಳ ಸಮಸ್ಯೆ ಪರಿಹರಿಸುವ ಕುರಿತು ಇ-ಸ್ವತ್ತು ದಾಖಲೆ ವಿತರಣೆಯಲ್ಲಿನ ಸಮಸ್ಯೆಗಳ ಕುರಿತ ಅಧ್ಯಯನ ನಡೆಸಲು ರಚಿಸಲಾಗಿರುವ ಸಮಿತಿ ಸಭೆ(E-Swattu Document Distribution Problem Study Committee Meeting) ಚರ್ಚಿಸಿತು.
ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ನಡೆದ ಮೊದಲ ಸಭೆಯಲ್ಲಿ ಸದಸ್ಯರು ಆಯಾ ಜಿಲ್ಲೆಗಳ ಅಕ್ರಮ-ಸಕ್ರಮ ಸಮಸ್ಯೆಗಳನ್ನು ಮಂಡಿಸಿದರು. ಮೊದಲ ಸಭೆಯಾದ್ದರಿಂದ ಸಮಸ್ಯೆಗಳ ಕುರಿತು ಚರ್ಚೆಯಾಗಿದೆ. ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಯಾವ ಆಸ್ತಿಗಳಿಗೆ ಬಿ ಖಾತೆ ಕೊಡಬೇಕು? ಯಾವ ಆಸ್ತಿಗಳಿಗೆ 11ಬಿ , 9,11 ಕೊಡಬೇಕು ಎಂಬ ಬಗ್ಗೆಯೂ ಪ್ರಾಥಮಿಕ ಚರ್ಚೆ ನಡೆಯಿತು.
ಹಿಂದೆ ಪಂಚಾಯಿತಿಗಳಿಂದ ಹಕ್ಕುಪತ್ರ ಕೊಡಲಾಗಿದೆ. ಅವುಗಳ ಸಮಸ್ಯೆ ಹೇಗೆ ಪರಿಹರಿಸಬೇಕು? ಅರಣ್ಯದಲ್ಲಿ ಕಟ್ಟಿರುವ ಮನೆಗಳು, ಕೃಷಿ ಜಮೀನಿನಲ್ಲಿ ಕಟ್ಟಿರುವ ಮನೆ, ಕಂದಾಯ ನಿವೇಶನಗಳಿಗೆ ಪರಿಹಾರ ಹೇಗೆ ಎಂಬ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು ಎಂದು ತಿಳಿದು ಬಂದಿದೆ.
ಸರ್ಕಾರಿ ಜಮೀನಿನಲ್ಲಿ ಕಟ್ಟಿಕೊಂಡಿರುವ ಮನೆಗಳ ವಿಚಾರದಲ್ಲಿ ಈಗಾಗಲೇ ಕಂದಾಯ ಇಲಾಖೆ 94 ಸಿ, 94ಸಿಸಿ ಹಕ್ಕುಪತ್ರ ಕೊಡಲು ತಯಾರಿ ನಡೆಸಿದೆ ಎಂಬ ವಿಷಯವನ್ನು ಸಭೆಯ ಮುಂದಿಡಲಾಯಿತು.
ಕೆಲವು ಕಡೆಗಳಲ್ಲಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೆ ಕೃಷಿ ಭೂಮಿಯಲ್ಲಿ ನಿವೇಶನ ರಚನೆ ಮಾಡಿ ನೋಂದಣಿ ಮಾಡಲಾಗಿದೆ. ಈ ವಸತಿ ಪ್ರದೇಶಗಳಿಗೆ ಈಗಾಗಲೇ ಪಂಚಾಯಿತಿಗಳಿಂದ ರಸ್ತೆ , ಕುಡಿಯುವ ನೀರು, ಬೀದಿ ದೀಪ ಹೀಗೆ ಎಲ್ಲ ಮೂಲಸೌಕರ್ಯ ಕಲ್ಪಿಸಲಾಗಿದೆ. ಇಂತಹ ವಸತಿ ಪ್ರದೇಶಗಳಿಗೆ ಯಾವ ರೀತಿಯ ಪರಿಹಾರ ಕೊಡಬೇಕು ಎಂಬ ಬಗ್ಗೆ ಪ್ರಾಥಮಿಕ ಹಂತದ ಚರ್ಚೆ ನಡೆದಿಎ ಎನ್ನಲಾಗಿದೆ.
ಸಭೆಯಲ್ಲಿ ಇ-ಸ್ವತ್ತು ದಾಖಲೆ ವಿತರಣೆಯಲ್ಲಿನ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಪರಿಹಾರ ಸೂಚಿಸಲು ರಚಿಸಲಾಗಿರುವ ಸಮಿತಿಯ ವಿಶೇಷ ಆಹ್ವಾನಿತ ಸದಸ್ಯ ಕೆ.ಜಿ.ಜಗದೀಶ್, ಸದಸ್ಯರಾದ ವಿಜಯ ಅಜೂರೆ, ಶಿವಶಂಕರ್ ಪಿ, ಬಸವರಾಜು ಶರಬಯ್ಯ, ಆಶಾ ಎಂ.ಜೆ., ಸಿದ್ದರಾಜು, ಪ್ರಭಾಕರ್ ಎನ್ ಭಟ್, ಚಾಲುಕ್ಯ ಭಾರವಿ, ಯಶವಂತ ಬೆಳ್ವಡ ಸೇರಿ ಎಲ್ಲ 12 ಜನ ಭಾಗವಹಿಸಿದ್ದರು.