‘ಇ- ಖಾತಾ’ ₹4 ಸಾವಿರ ಕೋಟಿ ಖೋತಾ!

Sub Register
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಸ್ಥಿರಾಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿದ ಪರಿಣಾಮ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದಾಯದ ಮೇಲೆ ಪರಿಣಾಮ ಬೀರಿದೆ. 2024-25ನೇ ಸಾಲಿನಲ್ಲಿ ನೀಡಲಾಗಿದ್ದ 26 ಸಾವಿರ ಕೋಟಿ ರೂ. ಗುರಿ ಪೈಕಿ 22 ಸಾವಿರ ಕೋಟಿ ರೂ.ಗೆ ತೃಪ್ತಿಪಡಬೇಕಾಗಿದ್ದು, 4 ಸಾವಿರ ಕೋಟಿ ರೂ. ಕುಸಿತ ಕಂಡಿದೆ.

2025-26ನೇ ಸಾಲಿಗೆ 28,000 ಕೋಟಿ ರೂ. ಟಾರ್ಗೆಟ್ ನೀಡಲಾಗಿದೆ. ಅನಧಿಕೃತ ಬಡಾವಣೆ ಎನ್ನಲಾಗುವ ರೆವಿನ್ಯೂ ಸೈಟ್‌ಗಳ ಮಾರಾಟ ಸಂಪೂರ್ಣ ಸ್ಥಗಿತವಾಗುವ ಹಿನ್ನೆಲೆಯಲ್ಲಿ ಆದಾಯದ ಗುರಿ ಮುಟ್ಟುವುದು ಇಲಾಖೆಗೆ ಸವಾಲಿನ ಕೆಲಸವಾಗಿದೆ.

ಇ-ಸ್ವತ್ತು, ಇ-ಆಸ್ತಿ ತಂತ್ರಾಂಶದಲ್ಲಿ ಪಡೆದ ಇ-ಖಾತಾ ಇಲ್ಲವೇ ಕೈಬರಹ ಖಾತಾ ಅಥವಾ ಭೌತಿಕ ಖಾತಾ ಮೇರೆಗೆ ಸ್ಥಿರಾಸ್ತಿಗಳ ದಸ್ತಾವೇಜುಗಳ ನೋಂದಣಿ ನಡೆಸುವುದಿಲ್ಲ ಎಂದು ಇಲಾಖೆ 2024ರ ಅಕ್ಟೋಬರ್‌ನಲ್ಲಿ ಕಡ್ಡಾಯ ಮಾಡಿದ್ದು, ನವೆಂಬರ್‌ನಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬಂದಿದೆ. ಬಿಬಿಎಂಪಿ, ನಗರಸಭೆ, ಪುರಸಭೆ ಸೇರಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಆಸ್ತಿಗಳಿಗೆ ಇ-ಆಸ್ತಿ ಸ್‌ಟಾವೇರ್‌ನಲ್ಲಿ ಇ-ಖಾತಾ ಮತ್ತು ಗ್ರಾಪಂ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತಿನಲ್ಲಿ ಡಿಜಿಟಲ್ ಖಾತಾ ಪಡೆಯಬೇಕಿದೆ. ಏಕಾಏಕಿ ಇ-ಖಾತಾ ಕಡ್ಡಾಯ ಮಾಡಿದ ಪರಿಣಾಮ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಸ್ತಾವೇಜುಗಳ ನೋಂದಣಿಯಲ್ಲಿ ಗಣನೀಯ ಇಳಿಕೆಯಾಗಿದೆ.

ಅದೇ ರೀತಿಯಾಗಿ ರಾಜಸ್ವ ಸಂಗ್ರಹದಲ್ಲಿಯೂ ಕಡಿಮೆಯಾಗಿದೆ. ಅಕ್ಟೋಬರ್‌ನಲ್ಲಿ 1,501 ಕೋಟಿ ರೂ. ಸಂಗ್ರಹವಾಗಿದ್ದು, ನವೆಂಬರ್‌ನಲ್ಲಿ 1,040 ಕೋಟಿ ರೂ.ಗೆ ಕುಸಿದಿದೆ. ಅಂದರೆ ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಶೇ.30.7 ಖೋತಾ ಆಗಿದೆ. ಸರ್ಕಾರದ ಬೊಕ್ಕಸ ತುಂಬಿಸುವಲ್ಲಿ ನೋಂದಣಿ, ಮುದ್ರಾಂಕ ಪ್ರಮುಖ ಇಲಾಖೆಯಾಗಿವೆ. ಮುಂದಿನ ಕೆಲ ತಿಂಗಳು ಇದೇ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಭಾರಿ ಹೊಡೆತ ಬೀಳಲಿದೆ. ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಇಲಾಖೆ ಅಧಿಕಾರಿಗಳ ಸಭೆ ಕರೆದು ಪ್ರತಿ ತಿಂಗಳು 2,400 ಕೋಟಿ ರೂ. ರಾಜಸ್ವ ಸಂಗ್ರಹಿಸುವಂತೆ ಟಾರ್ಗೆಟ್ ನೀಡಿದ್ದರು. ಆದರೆ, ಅಧಿಕಾರಿಗಳು ಸಾವಿರ ಕೋಟಿ ರೂ. ಸಂಗ್ರಹಕ್ಕೆ ತಿಣುಕಾಡುತ್ತಿದ್ದಾರೆ.

ರೆವಿನ್ಯೂ ಸೈಟ್‌ಗಳ ಮಾರಾಟ ಬಂದ್

ಕಾವೇರಿ 2.0 ತಂತ್ರಾಂಶಕ್ಕೆ ಇ-ಸ್ವತ್ತು, ಇ-ಆಸ್ತಿ, ಯುಎಲ್‌ಎಂಎಸ್ ಸಂಯೋಜನೆ ಮಾಡಿ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಇದರಿಂದ ಅಕ್ರಮ ಬಡಾವಣೆ ಎನ್ನಲಾಗುವ ರೆವಿನ್ಯೂ ಸೈಟ್‌ಗಳ ಮಾರಾಟ ಸಂಪೂರ್ಣ ಬಂದ್ ಆಗಲಿದೆ. ಈಗಾಗಲೇ ನೋಂದಣಿ ಆಗಿರುವ ಕಂದಾಯ ಸೈಟ್‌ಗಳಿಗೆ ಒಮ್ಮೆ ಬಿ-ಖಾತಾ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯರ್ ರಾಜ್ ಇಲಾಖೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಜತೆಗೆ ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಸ್ತಿಯಲ್ಲಿ ಇ-ಖಾತಾ ನೀಡುವ ವ್ಯವಸ್ಥೆ ಸಂಪೂರ್ಣ ಸರಿದಾರಿಗೆ ಬಂದಿಲ್ಲ. ಸ್‌ಟಾವೇರ್‌ನಲ್ಲಿ ಸಾಕಷ್ಟು ದೋಷಗಳಿದ್ದು, ಅಧಿಕಾರಿ ಸಿಬ್ಬಂದಿಗೆ ತಲೆನೋವಾಗಿದೆ. ಈ ಎಲ್ಲವೂ ಸರಿಹೋಗದಿದ್ದರೆ ಕಂದಾಯ ಇಲಾಖೆಗೆ ರೆವಿನ್ಯೂ ಖೋತಾ ಮುಂದುವರಿಯಲಿದೆ ಎಂದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಗುರಿ ಮುಟ್ಟದಿರಲು ಕಾರಣ

*ಪೂರ್ವಸಿದ್ಧತೆ ಇಲ್ಲದೆ ಏಕಾಏಕಿ ಇ-ಖಾತಾ ಕಡ್ಡಾಯ

* ತಂತ್ರಾಂಶದಲ್ಲಿ ಇ-ಖಾತಾ ನೀಡುವಲ್ಲಿ ಅಧಿಕಾರಿಗಳ ವಿಳಂಬ

*ಇ-ಆಸ್ತಿ ಸ್‌ಟಾವೇರ್‌ಗೆ ಅಪ್‌ಲೋಡ್ ಮಾಡಿದ ಡ್ರ್‌ಟಾನಲ್ಲಿ ದೋಷಗಳೇ ಹೆಚ್ಚು

* ಇ-ಖಾತಾ ಪಡೆಯಲು ಲಂಚ ಕೊಡದಿದ್ದರೆ ಸ್ಥಳೀಯ ಸಂಸ್ಥೆಗಳಲ್ಲಿ ವಿಳಂಬ

*ಇ-ಖಾತಾ ಪಡೆದರೂ ಕಾವೇರಿ 2.0ನಲ್ಲಿ ಲಿಂಕ್ ಆಗದೆ ರಿಜಿಸ್ಟ್ರೇಷನ್‌ಗೆ ತೊಂದರೆ

*ಇ-ಆಸ್ತಿ ಸ್‌ಟಾವೇರ್‌ನಲ್ಲಿ ಹೊಸ ಖಾತೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸದಿರುವುದು

*ಗ್ರಾಪಂನಲ್ಲಿ ರೆವಿನ್ಯೂ ಸೈಟ್‌ಗಳಿಗೆ ಬಿ-ಖಾತಾ ನೀಡುವಲ್ಲಿ ವಿಳಂಬ

2024-25ನೇ ಸಾಲಿನಲ್ಲಿ ಸಂಗ್ರಹವಾದ ರಾಜಸ್ವ

ತಿಂಗಳು       ರಾಜಸ್ವ ಸಂಗ್ರಹ

ಏಪ್ರಿಲ್         1709

ಮೇ              2027

ಜೂನ್          1899

ಜುಲೈ          2027

ಆಗಸ್ಟ್         2221

ಸೆಪ್ಟೆಂಬರ್    2104

ಅಕ್ಟೋಬರ್   1889

ನವೆಂಬರ್     1265

ಡಿಸೆಂಬರ್     1596

ಜನವರಿ        1760

ಫೆಬ್ರವರಿ      1773

ಮಾರ್ಚ್    1810

ಒಟ್ಟು       22,080

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net