ಇ-ಖಾತಾ ರಾಜಸ್ವ ಖೋತಾ!

Sub Register
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ರಾಜ್ಯದ ಉಪ ನೋಂದಣಿ ಕಚೇರಿಗಳಲ್ಲಿ ಸ್ಥಿರಾಸ್ತಿ ದಸ್ತಾವೇಜುಗಳ ನೋಂದಣಿಗೆ ಡಿಜಿಟಲ್ ಖಾತಾ (ಇ-ಖಾತಾ) ಕಡ್ಡಾಯ ಮಾಡಿದ ಪರಿಣಾಮ ಜನತೆ ಜತೆಗೆ ಸರ್ಕಾರದ ಖಜಾನೆಗೂ ಭಾರಿ ಆಘಾತ ತಟ್ಟಿದೆ. ರಾಜಸ್ವ ಶೇ.60 ಕುಸಿತ ಕಂಡಿರುವ ಪರಿಣಾಮ ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಬುಧವಾರ ನಾಲ್ವರು ಸಚಿವರ ಮಹತ್ವದ ಸಭೆ ಆಯೋಜಿಸಿದೆ.

ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ನಗರಾಭಿವೃದ್ಧಿ, ಪೌರಾಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.

ನವೆಂಬರ್ ಆಘಾತ: ಅಕ್ಟೋಬರ್ 28ರಿಂದ ಸಬ್ ರಿಜಿಸ್ಟ್ರಾರ್ ಕಚೇರಿಯ ಕಾವೇರಿ 2.0 ಸ್‌ಟಾವೇರ್‌ನಲ್ಲಿನ ಸಿಟಿಜನ್ ಲಾಗಿನ್‌ನಲ್ಲಿ ಕೈಬರಹ ಮತ್ತು ಭೌತಿಕ ಖಾತಾ ಸ್ವೀಕಾರದ ಸೌಲಭ್ಯ ಬಂದ್ ಮಾಡಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತು ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದಿಂದ ಮಾಹಿತಿ ರಿಜಿಸ್ಟ್ರೇಷನ್ ಮಾಡಬೇಕಾಗಿದೆ. ಅದರಿಂದ ನವೆಂಬರ್‌ನಲ್ಲಿ ಶೇ.40 ದಸ್ತಾವೇಜುಗಳ ನೋಂದಣಿ ಕುಸಿತ ಕಂಡಿದ್ದು, ಇದರ ಲವಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲೂ ಶೇ.60 ದಿಢೀರ್ ಕುಸಿತವಾಗಿದೆ. ವಾರದಲ್ಲಿ ಬುಧವಾರ, ಗುರುವಾರ ಮತ್ತು ಶುಕ್ರವಾರ ಶುಭ ದಿನವೆಂದು ಸರಾಸರಿ 10 ರಿಂದ 12 ಸಾವಿರ ಪತ್ರಗಳು ನೋಂದಣಿ ಆಗುತ್ತಿದ್ದವು.

ಅಕ್ಟೋಬರ್‌ನಲ್ಲಿ ಪ್ರತಿದಿನ ಅಂದಾಜು 110 ಕೋಟಿ ರೂ.- 156 ಕೋಟಿ ರೂ. ಸರ್ಕಾರದ ಬೊಕ್ಕಸ ತುಂಬಿರುವ ದಾಖಲೆ ‘ವಿಜಯವಾಣಿ’ಗೆ ಲಭ್ಯವಾಗಿದೆ. ಅದೇ ಇ-ಖಾತಾ ಜಾರಿಗೆ ಬಂದ ಮೇಲೆ ನವೆಂಬರ್‌ನಲ್ಲಿ ಏಕಾಏಕಿ 5 ರಿಂದ 9 ಸಾವಿರ ದಸ್ತಾವೇಜುಗಳ ನೋಂದಣಿಗೆ ಕುಸಿದೆ. ಮತ್ತೊಂದೆಡೆ ಪ್ರತಿದಿನ ರಾಜಸ್ವ ಸಂಗ್ರಹದಲ್ಲಿ ಕನಿಷ್ಠ 26 ಕೋಟಿ ರೂ.ಯಿಂದ ಗರಿಷ್ಠ 62 ಕೋಟಿ ರೂ. ಮಾತ್ರ ಸಂಗ್ರಹವಾಗುತ್ತಿದೆ.

2023-24ನೇ ಸಾಲಿನಲ್ಲಿ 25 ಸಾವಿರ ಕೋಟಿ ರೂ. ಮುದ್ರಾಂಕ ಮತ್ತು ನೋಂದಣಿ ರಾಜಸ್ವ ಸಂಗ್ರಹ ಟಾರ್ಗೆಟ್ ನೀಡಲಾಗಿತ್ತು. ಕೊನೆಗೆ 20,500 ಸಾವಿರ ಕೋಟಿ ರೂ. ತಲುಪಲು ಸಾಧ್ಯವಾಯಿತು. 2024-25ನೇ ಸಾಲಿನಲ್ಲಿ 26 ಸಾವಿರ ಕೋಟಿ ರೂ. ಗುರಿ ನೀಡಲಾಗಿದ್ದು, ಆಗಸ್ಟ್ ಅಂತ್ಯಕ್ಕೆ 9,827 ಕೋಟಿ ರೂ. (ಶೇ.37.80) ಸಂಗ್ರಹವಾಗಿದೆ. ಮುಂದಿನ 7 ತಿಂಗಳ ಅವಧಿಯಲ್ಲಿ 26 ಸಾವಿರ ಕೋಟಿ ರೂ. ಗುರಿ ಮುಟ್ಟುವುದು ಕಷ್ಟಸಾಧ್ಯವೆನ್ನುವ ಪರಿಸ್ಥಿತಿ ಇದೆ.

ಮೊನ್ನೆಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ರಾಜಸ್ವ ಸಂಗ್ರಹದ ಬಗ್ಗೆ ವರದಿ ಪಡೆದರು. ಉಳಿದಿರುವ ಅವಧಿಯಲ್ಲಿ ಪ್ರತಿ ತಿಂಗಳು ಅಂದಾಜು 2,400 ಕೋಟಿ ರೂ. ಸಂಗ್ರಹದ ಟಾರ್ಗೆಟ್ ನೀಡಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ತಿಂಗಳಿಗೆ 1 ಸಾವಿರ ಕೋಟಿ ರೂ. ಸಂಗ್ರಹಕ್ಕೂ ತಿಣುಕಾಟ ನಡೆಸಬೇಕಾಗುತ್ತದೆ ಎನ್ನಲಾಗುತ್ತಿದೆ.

ಅಧಿಕಾರಿಗಳ ಸಲಹೆ ನಿರ್ಲಕ್ಷ್ಯ

ಉಪ ನೋಂದಣಿ ಕಚೇರಿಯಲ್ಲಿ ಪ್ರತಿದಿನ ಸಾರ್ವಜನಿಕರೊಂದಿಗೆ ಕರ್ತವ್ಯ ನಿರ್ವಹಿಸುವ ಅಧಿಕಾರಿ ವರ್ಗ, ದಸ್ತಾವೇಜುಗಳ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡುವುದರ ಬಗ್ಗೆ ಸಲಹೆ ನೀಡಿತ್ತು. ಅಂದರೆ, ಇನ್ನು ಮುಂದೆ ರಿಜಿಸ್ಟ್ರೇಷನ್ ಆಗುವ ಸ್ಥಿರಾಸ್ತಿಗಳಿಗೆ ಕಡ್ಡಾಯವಾಗಿ ಡಿಜಿಟಲ್ ಖಾತಾ ನೀಡುವುದು ಮತ್ತು ಉಳಿದವರು ನಿಗದಿತ ಸಮಯದಲ್ಲಿ ಇ-ಖಾತಾ ಪಡೆಯುವಂತೆ ಸೂಚಿಸುವುದು ಸೂಕ್ತ. ಜನರಿಗೂ ಮತ್ತು ಸರ್ಕಾರಕ್ಕೂ ಯಾವುದೇ ತೊಂದರೆ ಆಗುವುದಿಲ್ಲ. ಇ-ಖಾತಾ ನೀಡದೆ ಏಕಾಏಕಿ ಕಡ್ಡಾಯ ಮಾಡುವುದು ಬೇಡವೆಂದು ಮೌಖಿಕ ವರದಿ ನೀಡಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.

ಎ ಖಾತಾಗೂ ಸಮಸ್ಯೆ

ಬಿಡಿಎ, ಕೆಎಚ್‌ಬಿ ಮತ್ತು ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆ, ಅಪಾರ್ಟ್‌ಮೆಂಟ್ ಮತ್ತು ವಿಲ್ಲಾಗಳಿಗೂ ಸರ್ಕಾರದಿಂದ ಡಿಜಿಟಲ್ ಖಾತಾ ವಿತರಿಸಿಲ್ಲ. ಕೈಬರಹದ ಎ ಖಾತಾ ಇದ್ದರೂ ಪ್ರಯೋಜನವಿಲ್ಲ. ಕ್ರಯ, ದಾನ, ವಿಲ್ ಅಥವಾ ಶೈಕ್ಷಣಿಕ ಸಾಲ, ಕಟ್ಟಡ ಮೇಲಿನ ಸಾಲ ಮತ್ಯಾವುದೇ ಕಷ್ಟ ಕಾಲಕ್ಕೆ ಬಳಸಲು ಸಾಧ್ಯವಾಗುತ್ತಿಲ್ಲ. ಪರಿಣಾಮ ರಿಜಿಸ್ಟ್ರೇಷನ್ ನಡೆಯದೆ ಸರ್ಕಾರಕ್ಕೆ ರಾಜಸ್ವ ಸಂಗ್ರಹದಲ್ಲಿ ನಷ್ಟವಾಗಿದೆ. ಮತ್ತೊಂದೆಡೆ ರೆವಿನ್ಯೂ ಸೈಟ್‌ಗಳ ನೋಂದಣಿಯಿಂದ ಸಾವಿರಾರು ಕೋಟಿ ರೂ. ಆದಾಯವಿದ್ದು, ಇದೀಗ ಇ-ಖಾತಾ ಇಲ್ಲದೆ ದೊಡ್ಡ ಹೊಡೆತ ಬಿದ್ದಿದೆ.

ರಿಜಿಸ್ಟ್ರೇಷನ್ ಮತ್ತು ರಾಜಸ್ವ ಸಂಗ್ರಹ ಇಳಿಮುಖ (ರಾಜಸ್ವ ಕೋಟಿ ರೂ.ನಲ್ಲಿ)

-----------------------------------------------------

ದಿನಾಂಕ/ಅಕ್ಟೋಬರ್/ ನವೆಂಬರ್

---------------------------------------------------------

ರಿಜಿಸ್ಟ್ರೇಷನ್- ರಾಜಸ್ವ /ರಿಜಿಸ್ಟ್ರೇಷನ್-ರಾಜಸ್ವ

---------------------------------------------------------

01 /7,472- 50.91 /ಕನ್ನಡ ರಾಜ್ಯೋತ್ಸವ

03 /9,233- 80.99/ ಭಾನುವಾರ

04/ 12,541 -148.29/ 6,147- 33.32

05 /11,028- 120.55 /5,951 -26.48

06 /ಭಾನುವಾರ /7,169- 51.46

07 /10,234- 119.28 /8,722- 54.47

08 /                     /9,145 -62.05

09 /9,869 -95.86/ ಮೊದಲ ಶನಿವಾರ

10 /10,434 -101.83/ ಭಾನುವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net