

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಡಾವಣೆ ಮತ್ತು ವಸತಿ ಯೋಜನೆಗಳ ಆಸ್ತಿಗಳ ದಸ್ತಾವೇಜು ನೋಂದಣಿಗೆ ಶುಕ್ರವಾರದಿಂದ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಇಲ್ಲವಾದರೆ, ಮಾರಾಟ, ದಾನ, ವಿಲ್ ಮತ್ಯಾವುದೇ ನೋಂದಣಿಗೆ ಸಬ್ ರಿಜಿಸ್ಟ್ರಾರ್‌ನಲ್ಲಿ ಪರಿಗಣಿಸುವುದಿಲ್ಲ.
ಬಿಡಿಎ ಲೇಔಟ್, ವಸತಿ ಯೋಜನೆಗಳ ಆಸ್ತಿಗಳಿಗೆ ಯುನಿೈಡ್ ಲ್ಯಾಂಡ್ ಮ್ಯಾನೇಜ್ಮೆಂಟ್ ಸಿಸ್ಟಂನಲ್ಲಿ (ಯುಎಲ್‌ಎಂಎಸ್) ಇ-ಖಾತಾ ವಿತರಿಸಲಾಗುತ್ತಿದೆ. ಈ ಯುಎಲ್‌ಎಂಎಸ್ ಸ್‌ಟಾವೇರ್‌ನ್ನು ಕಾವೇರಿ 2.0 ತಂತ್ರಾಂಶಕ್ಕೆ ಸಂಯೋಜನೆ ಮಾಡಲಾಗಿದೆ. ಪಕ್ಷಕಾರರು, ದಸ್ತಾವೇಜು ನೋಂದಣಿಗೆ ಬಂದಾಗ ಯುಎಲ್‌ಎಂಎಸ್ ಸ್‌ಟಾವೇರ್‌ನಿಂದ ಮಾಹಿತಿ ಪಡೆದು ನೋಂದಣಿ ಪ್ರಕ್ರಿಯೆ ನಡೆಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸೂಚನೆ ನೀಡಿದೆ.
ಕೈಬರಹ ಸಹಿವುಳ್ಳ ಬಿಡಿಎ ಖಾತಾ ಪ್ರಮಾಣ ಪತ್ರಗಳನ್ನು ಪರಿಗಣಿಸದಂತೆ ಸಬ್ ರಿಜಿಸ್ಟ್ರಾರ್‌ಗಳಿಗೆ ತಾಕೀತು ಮಾಡಲಾಗಿದೆ. ಇದರಿಂದ ಸ್ವತ್ತುಗಳ ನೋಂದಣಿ ವೇಳೆ ಸಾರ್ವಜನಿಕರು ಮೋಸ ಹೋಗುವುದನ್ನು ತಡೆಯಬಹುದಾಗಿದೆ. ಇ-ಖಾತಾದಿಂದ ಮಾತ್ರ ಸ್ವತ್ತಿನ ಸ್ವರೂಪ ಮತ್ತು ನೈಜ ಮಾಲೀಕರ ಗುರುತು ಮಾಡಲು ಸಾಧ್ಯ. ಈ ವಾರಸುದಾರರಿಗೆ ವಂಚಿಸಿ ನಕಲಿ ದಾಖಲೆ ಸೃಷ್ಟಿಸಿ ಕಬಳಿಸುವರಿಗೆ ಕಡಿವಾಣ ಬೀಳಲಿದೆ. ಖರೀದಾರರಿಗೂ ಅಸಲಿ ಮಾಲೀಕರ ಗುರುತು ನೀಡಲಿದೆ. ಭವಿಷ್ಯದಲ್ಲಿ ಉಂಟಾಗಬಹುದಾದ ಭೂ ವ್ಯಾಜ್ಯ, ಕಾನೂನು ತೊಂದರೆಗಳನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ದಸ್ತಾವೇಜು ನೋಂದಣಿಗೆ ಇ-ಆಸ್ತಿ ತಂತ್ರಾಂಶದಿಂದ ಪಡೆದ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಸೆ.9ರಿಂದ ಚಿತ್ರದುರ್ಗ, ಚಾಮರಾಜನಗರ, ಬಾಗಲಕೋಟೆ ಮತ್ತು ರಾಯಚೂರು ಜಾರಿಗೆ ಬಂದಿದೆ. ಈ ಜಿಲ್ಲೆಗಳ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದಿಂದ ಇ-ಖಾತಾ ವಿತರಿಸಲಾಗಿದೆ. ಕೃಷಿ ಜಮೀನು ನೋಂದಣಿಗೆ ಭೂಮಿ ತಂತ್ರಾಂಶದೊಂದಿಗೆ 2006ರಲ್ಲಿ ಕಾವೇರಿ ತಂತ್ರಾಂಶಕ್ಕೆ ಸಂಯೋಜನೆ ಮಾಡಿ ಸರ್ವೇ ನಕ್ಷೆ (ಸ್ಕೆಚ್) ನಮೂನೆ-11ಇ ಕಡ್ಡಾಯ ಮಾಡಿ ಮೋಜಿಣಿ ಸ್‌ಟಾವೇರ್‌ಗೆ ಲಿಂಕ್ ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯ ಕೃಷಿಯೇತರ ಸ್ವತ್ತುಗಳ ದಸ್ತಾವೇಜು ನೋಂದಣಿಗೆ ಇ-ಸ್ವತ್ತು ತಂತ್ರಾಂಶದಿಂದ ಪಡೆದ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪಿ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.