ರಾಮನಗರ : ಜಿಲ್ಲೆಯ ಗ್ರಾಮೀಣ ಭಾಗದ ಆಸ್ತಿಗಳಿಗೆ ಇ-ಖಾತೆ ಒದಗಿಸಿಕೊಡುವ ನಿಟ್ಟಿನಲ್ಲಿ ಮೋಜಿಣಿ ಸಮಸ್ಯೆ ಎದುರಾಗಿದೆ.
ಮಾಲೀಕರಿಗೆ ಕ್ರಮಬದ್ಧವಾದ ಆಸ್ತಿ ಪತ್ರ ನೀಡಲು ಜಿಲ್ಲಾ ಪಂಚಾಯಿತಿಯು 120 ಗ್ರಾಪಂ ವ್ಯಾಪ್ತಿಯಲ್ಲಿ ಈ ಹಿಂದೆ ಇ-ಖಾತಾ ಆಂದೋಲನ ಹಮ್ಮಿಕೊಂಡಿತ್ತು.
ಈಗಲೂ 11ಎ ಅಂತಹ ಇ-ಖಾತೆ ಪಡೆಯಬೇಕಾದರೆ ಮೋಜಿಣಿಯ ಅಗತ್ಯವಿದ್ದು, ಇದನ್ನು ಪಡೆದುಕೊಳ್ಳಲು ಸಾಹಸಪಡಬೇಕಾದ ಸನ್ನಿವೇಶ ನಿರ್ಮಾಣಗೊಂಡಿದೆ. ಹೀಗಾಗಿ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಅರ್ಜಿಗಳು ಬಾಕಿ ಉಳಿದಿವೆ.
ಇ-ಖಾತೆಗೆ ಅರ್ಜಿ ಹಾಕಲು ಮೋಜಿಣಿ ಅಗತ್ಯವಾಗಿ ಬೇಕಾದ ದಾಖಲೆಯಾಗಿದೆ. ಇದನ್ನು ಪಡೆದುಕೊಳ್ಳಬೇಕಾದರೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕು.
ಒಮ್ಮೆ ಅರ್ಜಿ ಸಲ್ಲಿಕೆಯಾದ ನಂತರ ಇದು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಲಾಗಿನ್‌ಗೆ ಹೋಗುತ್ತದೆ. ನಂತರ ಅರ್ಜಿ ವಿಲೇವಾರಿ ಆಗಿ, ಸರ್ವೇ ನಡೆದು ಮೋಜಿಣಿ ದೊರೆಯಬೇಕಾದರೆ ಕನಿಷ್ಠ 6 ತಿಂಗಳು ಬೇಕಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುವುದರಿಂದ ಮೋಜಿಣಿ ಪಡೆಯುವ ಅವಧಿ ವರ್ಷವಾಗುತ್ತದೆ.
ವಿನೂತನ ಪ್ರಯತ್ನ: ಜಿಲ್ಲೆಯಲ್ಲಿ ಇ-ಖಾತೆ ತಂತ್ರಜ್ಞಾನ ಚಾಲ್ತಿಗೆ ಬಂದು 15 ವರ್ಷ ಕಳೆದರೂ ಇ-ಖಾತೆ
ಪಡೆದ ಆಸ್ತಿಗಳ ಪ್ರಮಾಣ ತೀರಾ ಕಡಿಮೆ. ಇದಕ್ಕೆ ಸ್ಥಳೀಯ ಅಧಿಕಾರಿಗಳು ಹಾಗೂ ಮೇಲ್ಮಟ್ಟದಲ್ಲಿ ಅಧಿಕಾರಿಗಳ
ನಿರಾಸಕ್ತಿ ಕಾರಣ ಎನ್ನಬಹುದು. ಕಷ್ಟವಾದರೂ ಸ್ವಲ್ಪಮಟ್ಟಿನ ಯಶಸ್ಸು ಸಾಧಿಸಬೇಕು, ಆಸ್ತಿಗಳ ಮಾಹಿತಿಯನ್ನು ಇ-ಖಾತಾ ವ್ಯಾಪ್ತಿಗೆ ತರಲೇಬೇಕು ಎನ್ನುವಉದ್ದೇಶದಿಂದ ಆಂದೋಲನಕ್ಕೆ ಚಾಲನೆ ನೀಡಲಾಗಿತ್ತು. ಮೋಜಿಣಿ ಸಮಸ್ಯೆ ಆಂದೋಲನಕ್ಕೆ ತೊಡಕಾಗಿದೆ.
ಹಂಚಿಕೆಯಲ್ಲಿ ವಿಳಂಬ: ಭೂ ದಾಖಲೆಗಳ ಉಪನಿರ್ದೇಕರ ಕಚೇರಿ ಮಾಹಿತಿ ಪ್ರಕಾರ ಗ್ರಾಪಂಗೆ ಮೋಜಿಣಿಗೆ ಅರ್ಜಿ ಸಲ್ಲಿಕೆ ಆದರೂ ಅದು ರಾಜ್ಯದ ಸರ್ವರ್‌ಗೆ ರವಾನೆ ಆಗುತ್ತದೆ. ನಂತರ ಇಲ್ಲಿಂದ ಪ್ರತಿ ಸರ್ವೇಯರ್‌ಗೆ ತಿಂಗಳಿಗೆ ತಲಾ 23ರಂತೆ ಸ್ವಯಂ ಹಂಚಿಕೆ ಆಗುತ್ತದೆ. ನಂತರ ಜಿಲ್ಲೆಯಲ್ಲಿರುವ 46 ಸರ್ವೇಯರ್‌ಗಳು ಸರ್ವೇ ಮಾಡಿ ಮೋಜಿಣಿ ನೀಡುತ್ತಾರೆ.
ಇದರಿಂದಾಗಿ ಒಮ್ಮೆ 800 ರೂ. ಕಟ್ಟಿ ಮೋಜಿಣಿಗೆ ಅರ್ಜಿ ಹಾಕಿದರೂ, ಸಿನಿಯಾರಿಟಿ ಪ್ರಕಾರ ಸರ್ವೇಗೆ ಬರಬೇಕಾದರೆ ಸಾಕಷ್ಟು ಸಮಯ ಹಿಡಿಯುತ್ತಿದೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಲಭ್ಯವಿರುವ ಸರ್ವೇಯರ್‌ಗಳನ್ನು ಸ್ವಾಮಿತ್ವ ಮತ್ತು ಆಕಾರ್ ಬಂದ್‌ನಂತಹ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದರಿಂದಲೂ ವಿಳಂಬವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಸಂಖ್ಯೆ ಹೆಚ್ಚುತ್ತಲೇ ಇದೆ
ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಯಿಂದಲೇ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ ಸುಮಾರು 5 ಸಾವಿರದ ಗಡಿ ದಾಟಿದೆ. ಪ್ರತಿ ಇ-ಖಾತೆಗೆ ಮೋಜಿಣಿ ಅಗತ್ಯವಿದ್ದು, ಇದಕ್ಕಾಗಿ ಅರ್ಜಿದಾರ 800 ರೂ.ಗಳನ್ನು ಸಂದಾಯ ಮಾಡಿರುತ್ತಾನೆ.
ಆದರೆ ಈಗಿನ ಪರಿಸ್ಥಿತಿ ನೋಡಿದರೆ ಮತ್ತಷ್ಟು ಅರ್ಜಿಗಳು ಸಲ್ಲಿಕೆಯಾಗಲಿದ್ದು, ಬಾಕಿ ಉಳಿಯುವ ಅರ್ಜಿಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಡಿಡಿಎಲ್‌ಆರ್ ಮತ್ತು ಜಿಪಂ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡು ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕಿದೆ.
ನಮ್ಮಲ್ಲಿರುವ ಸರ್ವೇಯರ್‌ಗಳಿಗೆ ರಾಜ್ಯ ಸರ್ವರ್ ಮೂಲಕವೇ ಸ್ವಯಂಚಾಲಿತವಾಗಿ ಗುರಿ ನಿಗದಿ ಮಾಡಲಾಗುತ್ತದೆ. ಇದರ ಜತೆಗೆ ಸ್ವಮಿತ್ವ ಮತ್ತು ಆಕಾರ್‌ಬಂದ್‌ನಂತಹ ಕಾರ್ಯಕ್ರಮದಲ್ಲೂ ತೊಡಗಿಸಿಕೊಂಡಿದ್ದಾರೆ. ಸಂತೋಷ್ ಡಿಡಿಎಲ್‌ಆರ್, ರಾಮನಗರ ಇ-ಖಾತೆ ಬೇಕಾದರೆ ಮೋಜಿಣಿ ಅತ್ಯಗತ್ಯವಾಗಿ ಬೇಕು. ಆದರೆ ಮೋಜಿಣಿಯದ್ದೇ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಪಂ ಮತ್ತು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಎಸ್.ಪಿ.ಜಗದೀಶ್ ಅಧ್ಯಕ್ಷ, ರಾಮನಗರ ತಾಪಂ