ಪೂರ್ವ ತಯಾರಿ ಇಲ್ಲದೆ ಇ ಖಾತಾ ವ್ಯವಸ್ಥೆ ಜಾರಿ ಸರ್ಕಾರದ ಬೊಕ್ಕಸಕ್ಕೂ ನಷ್ಟ, ಜನರಿಗೂ ಸಂಕಷ್ಟ ವ್ಯವಸ್ಥೆ ಸರಳೀಕರಣಕ್ಕೆ ಆರ್.ಅಶೋಕ ಆಗ್ರಹ

R Ashok
Published on

ಬೆಂಗಳೂರು:

ಪೂರ್ವ ತಯಾರಿ ಇಲ್ಲದೆ ಇ ಖಾತಾ ವ್ಯವಸ್ಥೆಯನ್ನು ಸರ್ಕಾರ ಜಾರಿ ಮಾಡಿದ್ದರಿಂದ ಜನರು ಪರದಾಡುವಂತಾಗಿದ್ದು, ಕೂಡಲೆ ಸರ್ಕಾರ ಗಮನಹರಿಸಿ ಇದನ್ನು ಸರಳೀಕರಣಗೊಳಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಇ ಖಾತಾ ಮಾಡುವ ಮುನ್ನ ಮಾಹಿತಿ ಪಡೆಯಬೇಕಿತ್ತು. ಇದಕ್ಕೆ ಬೇಕಾದ ದಾಖಲೆ ಯಾವುದು, ಯಾವ ವಿಭಾಗದಲ್ಲಿ ಎಷ್ಟು ಮಾಡಬಹುದು ಎಂದು ಆಲೋಚಿಸಬೇಕಿತ್ತು. ಏಕಾಏಕಿ ಇ ಖಾತಾ ಮಾಡಿರುವುದರಿಂದ ಜನರಿಗೆ ತೊಂದರೆಯಾಗಿದೆ ಎಂದರು.

ಈಗಾಗಲೇ ಅಪ್‌ಲೋಡ್ ಮಾಡಿರುವ ಇ ಖಾತಾಗಳಲ್ಲಿ ಮಾಲೀಕರ ಹೆಸರು, ಭೂಮಿಯ ಅಳತೆಯಲ್ಲಿ ತಪ್ಪಾಗಿದೆ. ಆಸ್ತಿ ವಿವರ ಸರಿಯಾಗಿ ಸಿಗುತ್ತಿಲ್ಲ. ಎನ್‌ಆರ್‌ಐ ಮಾಲೀಕತ್ವದ ಆಸ್ತಿಗೆ ಅಫಿಡವಿಟ್ ಮಾಡಬೇಕಿದೆ. ಈ ಯಾವ ಕೆಲಸಗಳೂ ಆಗಿಲ್ಲ. ಜನರಿಗೆ ಮನೆ ಸಾಲ ಸಿಗಲು ಇ ಖಾತಾ ಬೇಕಾಗುತ್ತದೆ. ದಿನಕ್ಕೆ 5 ರಿಂದ 6 ರಷ್ಟು ಇ ಖಾತಾ ಮಾಡಲಾಗುತ್ತಿದೆ. ಸರ್ಕಾರ ಲಂಚಕ್ಕೆ ಅವಕಾಶ ನೀಡಿ, ಜನರಿಗೆ ತೊಂದರೆ ನೀಡುತ್ತಿದೆ ಎಂದರು.

ಸರ್ಕಾರ ಕೂಡಲೇ ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು. ಯಾವುದೇ ಲಂಚವಿಲ್ಲದೆ ಜನರು ಸುಲಭವಾಗಿ ಸೇವೆ ಪಡೆಯುವಂತಾಗಬೇಕು. ಸುಲುಭವಾಗಿ ಇ ಖಾತಾ ವರ್ಗಾವಣೆಯಾಗಬೇಕು ಎಂದು ಆಗ್ರಹಿಸಿದರು.

ನಾನು ಕಂದಾಯ ಸಚಿವನಾಗಿದ್ದಾಗ ಶುಲ್ಕ ಕಡಿಮೆ ಮಾಡಿದ್ದೆ. ಈಗಿನ ಸರ್ಕಾರ ಮುದ್ರಾಂಕ ಶುಲ್ಕವನ್ನು ಶೇ.200-250 ಹೆಚ್ಚಿಸಿದ್ದೆ. ಈಗ ದಿಢೀರ್ ಜಾರಿ ಮಾಡಿದ್ದರಿಂದ ಇ ಖಾತಾ ಬರೆ ಬಿದ್ದಿದೆ. ಸರ್ಕಾರ ಈ ಕುರಿತು ಕ್ರಮ ವಹಿಸದಿದ್ದರೆ ಸಾವಿರಾರು ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net