

ಶಿವಮೊಗ್ಗ: ಆಡಳಿತದಲ್ಲಿ ದಕ್ಷತೆ, ಸ್ಥಿರತೆ ಮತ್ತು ಯೋಜನೆಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಗಸ್ಟ್ 1ರಿಂದ ಅನ್ವಯಗೊಳ್ಳುವಂತೆ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಡಳಿತ ವ್ಯವಸ್ಥೆ ಜಾರಿಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿ ಜಿಲ್ಲೆಯ 11 ಸ್ಥಳೀಯ ಸಂಸ್ಥೆಗಳಿಗೆ ಅನುಕುಲವಾಗುವಂತೆ ವಿನ್ಯಾಸಗೊಳಿಸಿದ ಇ-ಆಡಳಿತ ತಂತ್ರಾಂಶವನ್ನು ಉದ್ಘಾಟಿಸಿದ ಬಳಿಕ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಫೀಸ್ ವ್ಯವಸ್ಥೆ ಅನುಷ್ಠಾನಗೊಳ್ಳುತ್ತಿರುವ ರಾಜ್ಯದ ಮೊದಲ ಜಿಲ್ಲೆ ಇದಾಗಿದೆ ಎಂದರು.
ಸಾರ್ವಜನಿಕರ ಅಮೂಲ್ಯ ಸಮಯವನ್ನು ಉಳಿಸುವುದಲ್ಲದೆ ಅವರ ಬೇಡಿಕೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಇ-ತಂತ್ರಾಂಶ ಸಹಕಾರಿಯಾಗಲಿದೆ. ಕಡತಗಳ ಅನಗತ್ಯ ವಿಳಂಬವನ್ನು ತಪ್ಪಿಸಿ, ಆಡಳಿತದಲ್ಲಿ ಗುಣಮಟ್ಟವನ್ನು ಸುಧಾರಿಸುವಲ್ಲಿ, ಪಾರದರ್ಶಕತೆ ಕಂಡುಕೊಂಡು ಅಧಿಕಾರಿಗಳಿಗೆ ಹೊಣೆಗಾರಿಕೆ ಸ್ಥಾಪಿಸಿ, ರಚನಾತ್ಮಕವಾಗಿ ಕಾರ್ಯನಿರ್ವಹಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಸಾರ್ವಜನಿಕರಿಗೆ ಒದಗಿಸುವ ಮಾಹಿತಿಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯೊಂದಿಗೆ ಸರ್ಕಾರದ ಆಡಳಿತವನ್ನು ವೇಗಗೊಳಿಸುವ ಮಹತ್ವದ ಉದ್ದೇಶದೊಂದಿಗೆ ಮಾಹಿತಿ ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಇ-ಆಡಳಿತ ಕಚೇರಿ ವ್ಯವಸ್ಥೆಯು ಸರಳೀಕೃತ, ಸ್ಪಂದಿಸುವ, ಪರಿಣಾಮಕಾರಿ, ಜವಾಬ್ದಾರಿಯುತ ಮತ್ತು ಪಾರದರ್ಶಕ ಕೆಲಸವನ್ನು ಸಾಧಿಸುವ ಮಾಧ್ಯಮವಾಗಿದೆ. ಇ-ಆಡಳಿತನ ವೇಗ ಮತ್ತು ದಕ್ಷತೆಯು ಇಲಾಖೆಗಳಿಗೆ ತಿಳುವಳಿಕೆಯುಳ್ಳ ಮತ್ತು ಕ್ಷಿಪ್ರ ನಿರ್ಧಾರಕ್ಕೆ ಸಹಕರಿಸುವುದಲ್ಲದೆ ಬಹುಮುಖ್ಯವಾಗಿ ಅವುಗಳನ್ನು ಕಾಗದ ರಹಿತವಾಗುವಂತೆ ಮಾಡಲಿದೆ ಎಂದರು.
ಇದೇ ವೇಳೆ ಎಲ್ಲ ತಾಲೂಕುಗಳಲ್ಲಿ ಗೃಹಲಕ್ಷಿ ಯೋಜನೆಯ ಪ್ರಗತಿಗೆ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಗಮನಹರಿಸಬೇಕು. ಭದ್ರಾವತಿ, ಸಾಗರ ಮತ್ತು ಶಿವಮೊಗ್ಗ ತಾಲೂಕುಗಳ ಪ್ರಗತಿ ಇನ್ನಷ್ಟು ತ್ವರಿತಗೊಳಿಸಬೇಕು. ನಿರೀಕ್ಷಿತ ಅವಧಿಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಡಿಸಿ ಸೂಚಿಸಿದರು. ಸಮುದಾಯ ಸಂಪರ್ಕಾಧಿಕಾರಿ ಮೋಹನ್‌ಕುಮಾರ್, ಇ-ಆಡಳಿತದ ಸಂಪರ್ಕಾಧಿಕಾರಿ ಅನೂಪ್, ಜಿಲ್ಲಾ ನೋಡಲ್ ಅಧಿಕಾರಿ ಸುದೀಪ್ ಉಪಸ್ಥಿತರಿದ್ದರು.
ಇ-ತಂತ್ರಾಂಶದಲ್ಲಿ ವ್ಯವಸ್ಥಿತ ನಿರ್ವಹಣೆ
ಸ್ಥಳೀಯ ಸಂಸ್ಥೆಗಳು ಅರ್ಜಿ ಸ್ವೀಕರಿಸಿದ ಕ್ಷಣದಿಂದ ಸರಿಯಾದ ಕ್ರಮಗಳ ಮೂಲಕ ಅದನ್ನು ವಿಲೇವಾರಿ ಮಾಡುವವರೆಗೆ ಕ್ರಮ ವಹಿಸಲಿದೆ. ಇದು ಕಡತದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಹಂತಗಳನ್ನು ಒಳಗೊಂಡಿರಲಿದೆ. ಸ್ಕ್ಯಾನಿಂಗ್, ಫೈಲ್ ರಚನೆ, ಟಿಪ್ಪಣಿ ರಚನೆ ಮತ್ತು ಡ್ರಾಫ್ಟ್‌ಗಳಲ್ಲಿ ಡಿಜಿಟಲ್ ಸಹಿ ಮಾಡುವುದು, ರವಾನೆ, ಫೈಲ್‌ಗಳ ವ್ಯವಸ್ಥಿತ ನಿರ್ವಹಣೆ ಇತ್ಯಾದಿ ಕೆಲಸಗಳನ್ನು ಇ-ತಂತ್ರಾಂಶದಲ್ಲಿ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ನಗರ ಯೋಜನಾಧಿಕಾರಿ ಮೂಕಪ್ಪ ಕರಭೀಮಣ್ಣನವರ್ ಹೇಳಿದರು.