ಮುಖ್ಯಮಂತ್ರಿ ಬಾಮೈದನ ವಿಚಾರಣೆ ನಡೆಸಿದ ಇ.ಡಿ

cm siddaramayya
Published on

ಬೆಂಗಳೂರು: ಮುಡಾ ಹಗರಣದ ತನಿಖೆ ಮತ್ತಷ್ಟು ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಸೋಮವಾರ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ.

ಪ್ರಕರಣದ ಸಂಬಂಧ ವಿಚಾರಣೆಗೆ ಬರುವಂತೆ ಇ.ಡಿ ಅಧಿಕಾರಿಗಳು ಇತ್ತೀಚೆಗೆ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಹೀಗಾಗಿ, ಸೋಮವಾರ ಬೆಂಗಳೂರಿನ ಶಾಂತಿನಗರದಲ್ಲಿನ ಇ.ಡಿ ಕಚೇರಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ವಿಚಾರಣೆಗೆ ಹಾಜರಾಗಿದ್ದರು.

ಇ.ಡಿ ಅಧಿಕಾರಿಗಳು ಮಧ್ಯಾಹ್ನ ೨ ಗಂಟೆಯಿಂದ ೬ ಗಂಟೆವರೆಗೂ ಸತತ ೪ ಗಂಟೆಗಳ ಕಾಲ ಮಲ್ಲಿಕಾರ್ಜುನ ಸ್ವಾಮಿಯವರ ವಿಚಾರಣೆ ನಡೆಸಿದರು.

ಮಲ್ಲಿಕಾರ್ಜುನ ಸ್ವಾಮಿ ಅವರು ತಮ್ಮ ಸಹೋದರಿ ಪಾರ್ವತಿ (ಸಿದ್ದರಾಮಯ್ಯ ಅವರ ಪತ್ನಿ) ಅವರಿಗೆ ದಾನ ಕೊಟ್ಟಿದ್ದಾರೆ ಎನ್ನಲಾದ ಮೈಸೂರಿನ ಕೆಸರೆ ಗ್ರಾಮದ ೩.೧೬ ಎಕರೆ ಜಮೀನಿಗೆ ಸಂಬಂಧಪಟ್ಟಂತೆ ಅಧಿಕಾರಿಗಳು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡರು.

ಕೆಸರೆ ಗ್ರಾಮದ ಅದೇ ಜಮೀನನ್ನು ಮುಡಾ ಸ್ವಾಧೀನಪಡಿಸಿಕೊಂಡು ಬಡಾವಣೆ ನಿರ್ಮಿಸಿತ್ತು. ಇ.ಡಿ ಅಧಿಕಾರಿಗಳು ಆ ಜಮೀನಿನ ದಾಖಲೆಪತ್ರಗಳನ್ನು ಮುಂದಿಟ್ಟು ಪ್ರಶ್ನೆಗಳನ್ನು ಕೇಳಿದರು. ಆ ಜಮೀನನ್ನು ಮೂಲ ಮಾಲೀಕ ದೇವರಾಜು ಅವರಿಂದ ಯಾವಾಗ ಖರೀದಿಸಲಾಗಿತ್ತು? ಹೇಗೆ ಖರೀದಿ ಮಾಡಲಾಗಿತ್ತು? ಪಾರ್ವತಿ ಅವರಿಗೆ ಜಮೀನು ದಾನ ಮಾಡಿದ್ದು ಯಾವಾಗ? ಎಂದು ಅಧಿಕಾರಿಗಳು ಹಲವು ಪ್ರಶ್ನೆ ಮಾಡಿದರು.

ದಾಖಲೆಪತ್ರಗಳ ಸಮೇತ ವಿಚಾರಣೆಗೆ ಹಾಜರಾಗಿದ್ದ ಮಲ್ಲಿಕಾರ್ಜುನ ಸ್ವಾಮಿ ಅವರು ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ ಎನ್ನಲಾಗಿದೆ. ಮುಡಾ ನಿವೇಶನಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಸಂಬಂಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಅವರು ಮೂರನೇ ಆರೋಪಿಯಾಗಿದ್ದಾರೆ. ಲೋಕಾಯುಕ್ತ ಪೊಲೀಸರು ಸಹ ಅ.೧೦ರಂದು ಮಲ್ಲಿಕಾರ್ಜುನ ಸ್ವಾಮಿಯ ವಿಚಾರಣೆ ನಡೆಸಿದ್ದರು. ಮುಡಾ ಹಗರಣ ಸಂಬಂಧ ಇ.ಡಿ ಅಧಿಕಾರಿಗಳು ಮುಡಾದ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಹಿಂದಿನ ಆಯುಕ್ತರುಗಳಾದ ಜಿ.ಟಿ.ದಿನೇಶ್‌ಕುಮಾರ್, ಡಿ.ಬಿ.ನಟೇಶ್, ಸಿದ್ದರಾಮಯ್ಯ ಅವರ ಖಾಸಗಿ ಆಪ್ತ ಸಹಾಯಕ ಸಿ.ಟಿ.ಕುಮಾರ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿಯಾದ ಹಾಗೂ ರಾಯಚೂರಿನ ಕಾಂಗ್ರೆಸ್ ಸಂಸದ ಜಿ.ಕುಮಾರ್ ನಾಯಕ್ ಅವರನ್ನು ಇತ್ತೀಚೆಗೆ ವಿಚಾರಣೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net