ಇ.ಡಿ. ಮಧ್ಯ ಪ್ರವೇಶಿಸಿ ತನಿಖೆ ನಡೆಸಲಿ

siddaramaiah
Published on


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 5 ಸಾವಿರ ಕೋಟಿ ರೂ.ಗೂ ಹೆಚ್ಚು ಹಗರಣ ನಡೆದಿರುವ ಹಿನ್ನೆಲೆಯಲ್ಲಿ ಇ.ಡಿ. ಮಧ್ಯ ಪ್ರವೇಶಿಸಿ ತನಿಖೆಗೆ ಮುಂದಾಗಬೇಕು. ಇಲ್ಲದಿದ್ದರೆ ಇ.ಡಿ. ತನಿಖೆ ಕೋರಿ ತಾವೇ ಮನವಿಪತ್ರ ಸಲ್ಲಿಸುವುದಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ತಿಳಿಸಿದರು.
ಮುಡಾದಲ್ಲಿನ ಹಗಲು ದರೋಡೆಯನ್ನು ಈ ಮೊದಲೇ ತಾವು ಗಮನಕ್ಕೆ ತಂದಿದ್ದೆವು. ಪ್ರಕರಣ ಬೆಳಕಿಗೆ ಬಂದಾಗ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವೀರಾವೇಶದಿಂದ ಮಾತನಾಡಿದ್ದರು. ಈ ವೇಳೆ ಕೆಲ ಅಧಿಕಾರಿಗಳನ್ನು ವರ್ಗ ಮಾಡಿದ್ದನ್ನು ಬಿಟ್ಟರೆ ಬೇರೇನನ್ನೂ ಮಾಡಲಿಲ್ಲ. ವೆಂಕಟಾಚಲಪತಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಆಯಿತು. ಬಳಿಕ ದೇಸಾಯಿ ಆಯೋಗ ಸಹ ರಚನೆ ಆಗಿದೆ. ಹೀಗಿದ್ದರೂ ಹಗರಣದಲ್ಲಿ ಕೇಳಿಬಂದಿರುವ ಇಬ್ಬರು ಆಯುಕ್ತರಿಗೆ ನೋಟಿಸ್ ನೀಡಿ, ಕೂಡಲೇ ಬಂಧಿಸಬಹುದಾಗಿತ್ತು. ಆದರೆ ಈ ರೀತಿ ಮಾಡದೆ ಸಚಿವರು ಇವರನ್ನು ರಕ್ಷಿಸುತ್ತಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮುಡಾದಲ್ಲಿನ ಹಗರಣದಿಂದಾಗಿ ಸುಮಾರು ಸಾವಿರ ಕೋಟಿ ರೂ., ನಷ್ಟ ಉಂಟಾಗಿದೆ ಎಂದು ಅಂದಿನ ಜಿಲ್ಲಾಧಿಕಾರಿ ಬರೆದಿದ್ದ ಪತ್ರ ಆಧರಿಸಿ ತಾವು ಇ.ಡಿ. ಮಧ್ಯ ಪ್ರವೇಶಿಸುವಂತೆ ಕೋರಿ ಮನವಿ ಸಲ್ಲಿಸಲಿರುವುದಾಗಿ ತಿಳಿಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಷಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸ್ವಾಗತಾರ್ಹ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಕೊಡಬಾರದು ಅಂತೇನಿಲ್ಲ. ನೀವು ಸದನದಲ್ಲಿ ಉತ್ತರ ನೀಡಿದ್ದರೆ ನಾವು ಪಾದಯಾತ್ರೆ ಮಾಡುತ್ತಿರಲಿಲ್ಲ. ಮುಡಾದಲ್ಲಿ ಸಾಕಷ್ಟು ಅಕ್ರಮ ನಿವೇಶನ ಹಂಚಲಾಗಿದೆ. ಇದರ ವಿರುದ್ಧ ನಮ್ಮ ಹೋರಾಟ ಎಂದು ವಿವರಿಸಿದರು.
ಈ ತನಿಖೆ ನ್ಯಾಯಯುತವಾಗಿ ನಡೆಯಲು ಸಿಎಂ ನೈತಿಕತೆ ಹೊತ್ತು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು. ಕರ್ನಾಟಕದ ರಾಜಕಾರಣಕ್ಕೆ ದೊಡ್ಡ ಪರಂಪರೆ ಇದೆ. ರಾಮಕೃಷ್ಣ ಹೆಗಡೆ ಅವರು ಒಂದೇ ಒಂದು ಟೆಲಿಫೋನ್ ಹಗರಣದಲ್ಲಿ ರಾಜೀನಾಮೆ ನೀಡಿದರು. ರಾಮಕೃಷ್ಣ ಹೆಗಡೆ ನನ್ನ ಆದರ್ಶ ವ್ಯಕ್ತಿ ಅಂತ ಹೇಳುತ್ತಿದ್ದ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಮೇಯರ್ ಶೈಲೇಂದ್ರ, ಮುಖಂಡ ರಘು, ಮಹೇಶ್ ರಾಜೇ ಅರಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net