ಇ-ಸ್ವತ್ತು ನೋಂದಣಿ ಜಟಿಲ: ನಾಗರಿಕರ ಆಕ್ರೋಶ

e-swattu
ಇ-ಸ್ವತ್ತು ಕುರಿತ ಸಮಾಲೋಚನಾ ಸಭೆಯಲ್ಲಿ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಕೆ.ವಿ.ವಸಂತಕುಮಾರ್, ಎಸ್.ಎನ್.ಚನ್ನಬಸಪ್ಪ, ಬಿ.ಗೋಪಿನಾಥ್ ಮುಂತಾದವರಿದ್ದರು.
Published on

ಶಿವಮೊಗ್ಗ: ಲಂಚ ನೀಡಿದವರಿಗೆ ಪಾಲಿಕೆಯಲ್ಲಿ 2-3 ದಿನಗಳಲ್ಲೇ ಇ-ಸ್ವತ್ತು ಮಾಡಿಕೊಡಲಾಗುತ್ತಿದೆ. ನಗರಾಭಿವೃದ್ಧಿ ಇಲಾಖೆಯ ಮಾರ್ಗಸೂಚಿಗಳ ಪಾಲನೆಯಾಗುತ್ತಿಲ್ಲ. ಸರಳವಾಗಿ ನಡೆಯಬಹುದಾದ ಇ-ಸ್ವತ್ತು ನೋಂದಣಿಯನ್ನು ಅಧಿಕಾರಿಗಳು ಜಟಿಲವಾಗಿ ಮಾರ್ಪಡಿಸಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಏರ್ಪಡಿಸಿದ್ದ ಇ-ಸ್ವತ್ತು ನೋಂದಣಿಯಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅನೇಕರು ಪಾಲಿಕೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಆಸ್ತಿ ಮಾಲೀಕರ ಮೂಲ ದಾಖಲೆಗಳನ್ನು ಅಧಿಕಾರಿಗಳು ಸಾಫ್ಟ್‌ವೇರ್‌ಗೆ ಅಪ್‌ಲೋಡ್ ಮಾಡಿ ವೆಬ್‌ಸೈಟ್‌ನಲ್ಲಿ ಪರಿಶೀಲನೆ ಮಾಡಿಕೊಳ್ಳಿ ಎಂದು ನಾಗಕರಿಗೆ ಸೂಚಿಸುವ ಬದಲು ಇದೇ ಪ್ರಕ್ರಿಯೆಯನ್ನು ಸಂರ್ಕೀಣಗೊಳಿಸುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇ-ಸ್ವತ್ತು ನೋಂದಣಿ ವಿಷಯದಲ್ಲಿ ಆಸ್ತಿ ಮಾಲೀಕರಲ್ಲಿ ಉಂಟಾಗುತ್ತಿರುವ ಗೊಂದಲಕ್ಕೆ ಸರ್ಕಾರ ಹಾಗೂ ಪಾಲಿಕೆ ಸಿಬ್ಬಂದಿಯೇ ಕಾರಣ. ಪಿಐಡಿ ಸಂಖ್ಯೆಯಲ್ಲಿ ಆಸ್ತಿಯ ಎಲ್ಲ ಮಾಹಿತಿಯೂ ಇದೆ. ಅದನ್ನು ಸಾಫ್ಟ್‌ವೇರ್‌ಗೆ ಅಪ್‌ಲೋಡ್ ಮಾಡಬಹುದು. ಆದರೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಎಂದು ಒಕ್ಕೂಟದ ಅಧ್ಯಕ್ಷ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ ದೂರಿದರು.

ಪಾಲಿಕೆಯಲ್ಲಿ ಲಭ್ಯವಿರುವ ದಾಖಲೆಗಳನ್ನೇ ಪರಿಶೀಲಿಸಿ ಇ-ಸ್ವತ್ತು ಮಾಡಿಕೊಡಲು ಅವಕಾಶವಿದೆ. ಆದರೆ ಆಸ್ತಿ ಮಾಲೀಕರ ಬಳಿ ದಾಖಲೆಗಳನ್ನು ಕೇಳುತ್ತಿರುವುದು ವಿಪರ್ಯಾಸ. ಆದರೆ ಅಪ್‌ಲೋಡ್ ಆದ ಬಳಿಕ ಸರಿಯಿಲ್ಲದಿದ್ದರೆ ಏನು ದೋಷವಾಗಿದೆ ಎಂಬುದನ್ನು ಸಾರ್ವಜನಿಕರೇ ತಿಳಿಸಬೇಕು ಎಂಬುದು ಹಾಸ್ಯಾಸ್ಪದವಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಅಡಳಿತ ಯಂತ್ರವನ್ನು ತರಾಟೆಗೆ ತೆಗೆದುಕೊಂಡರು.

ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಬಸ್ ಮಾಲೀಕರ ಸಂಘದ ಅಧ್ಯಕ್ಷ ಆರ್.ರಂಗಪ್ಪ, ಕೈಗಾರಿಕೋದ್ಯಮಿ ವಿಶ್ವೇಶ್ವರಯ್ಯ, ಸಮಾಜಿಕ ಕಾರ್ಯಕರ್ತ ಕೋಟೆ ರಾಜು ಮುಂತಾದವರಿದ್ದರು.

ಸಭೆಯಲ್ಲಿ ಕೇಳಿಬಂದ ದೂರುಗಳು:

ದಾಖಲೆಗಳನ್ನು ಪರಿಶೀಲಿಸುವ ಅಧಿಕಾರಿಗಳು ಚೆಕ್ಕುಬಂದಿ ಸರಿ ಇಲ್ಲ ಎಂದು ಹೇಳುವುದು ಯಾವ ನ್ಯಾಯ?

ಅಧಿಕಾರಿಗಳು ಲಭ್ಯವಿಲ್ಲದ ದಾಖಲೆಗಳನ್ನು ಕೇಳುತ್ತಿರುವುದರ ಹಿಂದೆ ಯಾವುದೋ ಹಿತಾಸಕ್ತಿ ಇರುವಂತಿದೆ

ಆಸ್ತಿ ಮಾಲೀಕರು ಸಮಸ್ಯೆ ಹೇಳಿಕೊಳ್ಳಲು ಹೋದರೆ ಸಿಬ್ಬಂದಿಗಳೇ ಇರುವುದಿಲ್ಲ

ತೆರಿಗೆ ಕಟ್ಟುವವರು ನಾವಾದರೂ ಕಟ್ಟಿಸಿಕೊಳ್ಳುವವರು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ

ನಗರದಲ್ಲಿ 1.7 ಲಕ್ಷ ಆಸ್ತಿಗಳಿವೆ. ಆದರೆ ಈಗ ಇ-ಸ್ವತ್ತು ಆಗಿದ್ದು 10-12 ಸಾವಿರ ಮಾತ್ರ

ಆಸ್ತಿ ಮಾಲೀಕರನ್ನು ಆರೇಳು ತಿಂಗಳಿಂದ ಪಾಲಿಕೆಗೆ ಅಲೆದಾಡಿಸಲಾಗುತ್ತಿದೆ.

ದಾಖಲೆಗಳು ಅಧಿಕಾರಿಗಳ ಟೇಬಲ್ ಮೇಲೆ ಇದ್ದರೂ ಅವನ್ನು ನೋಡಿ ಸ್ಪಂದನೆ ಮಾಡುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net