ಕಗ್ಗದ ಬೆಳಕು: ವಿವೇಚನೆಯಿಂದ ಬಾಳಿನ ಪೋಷಣೆ

life vvani
Published on
ಚಿತ್ತದನುಭವ ಭಾವ ಸಂಭಾವನೆಗಳೆಲ್ಲ |

ಭತ್ತವದನು ವಿಚಾರ ಯುಕ್ತಿಗಳು ಕುಟ್ಟೆ ||

ತತ್ತ್ವತಂಡುಲ ದೊರೆಗುಮದು ವಿವೇಚಿತ ತತ್ತ್ವ |

ನಿತ್ಯ ಭೋಜನ ನಮಗೆ - ಮಂಕುತಿಮ್ಮ ||

‘ಚಿತ್ತದ ಅನುಭವ, ಅದರಿಂದ ಮೂಡಿದ ಭಾವ, ಕಲ್ಪನೆಗಳೆಲ್ಲ ಭತ್ತದಂತೆ. ಅದನ್ನು ವಿಚಾರ ಯುಕ್ತಿಗಳು ಕುಟ್ಟಿದರೆ ತತ್ತ್ವವೆಂಬ ಅಕ್ಕಿಯು ಸಿಗುತ್ತದೆ. ಅದೇ ವಿವೇಚನೆಗೆ ಒಳಗಾದ ತತ್ತ್ವ. ಇದೇ ನಮಗೆ ನಿತ್ಯಭೋಜನ’ ಎನ್ನುತ್ತದೆ ಈ ಕಗ್ಗ.

ಐತಿಹಾಸಿಕ ಮಹತ್ವವುಳ್ಳ ಸ್ಥಳಕ್ಕೆ ಪ್ರೇಕ್ಷಣೀಯ ಸ್ಥಳ ಎಂದು ಹೋಗುವವರು ಹಲವರು. ಅವರಿಗೆ ಆ ಸ್ಥಳದ ಇತಿಹಾಸವನ್ನು ತಿಳಿಯುವ ಕುತೂಹಲವಿಲ್ಲ. ಒಂದಷ್ಟು ಭಾವಚಿತ್ರಗಳನ್ನು ಸಂಗ್ರಹಿಸಿಕೊಳ್ಳುವುದು, ಅದನ್ನೇ ಮತ್ತೆಮತ್ತೆ ನೋಡಿ ಖುಷಿಪಡುವುದಷ್ಟೇ ಉದ್ದೇಶವಾಗಿರುತ್ತದೆ. ಆದರೆ ಇನ್ನು ಕೆಲವರು ಹಾಗಲ್ಲ, ಸ್ಥಳವನ್ನು ಸಂದರ್ಶಿಸುವ ಮೊದಲೇ ಗತ ಇತಿಹಾಸವನ್ನು ತಿಳಿದಿರುತ್ತಾರೆ ಅಥವಾ ಬಲ್ಲವರಿಂದ ಕೇಳಿ ತಿಳಿಯುತ್ತಾರೆ. ಇತಿಹಾಸದ ಹಿನ್ನೆಲೆಯ ಬೆಳಕಿನಲ್ಲಿ ವಾಸ್ತವ ಪ್ರಪಂಚವನ್ನು ತೆರೆದ ಕಂಗಳಿಂದ ಗಮನಿಸುತ್ತಾರೆ. ವಿಚಾರದ ಹೊಸ ಹೊಳಹು ಅವರೊಳಗೆ ಮೂಡುತ್ತದೆ. ಮೊದಲ ರೀತಿಯ ಸಂದರ್ಶಕರಿಗೆ ಈ ಸಂತಸ, ಸಂತೃಪ್ತಿ ಲಭ್ಯವಾಗದು. ಜೀವನಯಾತ್ರೆಯಲ್ಲಿಯೂ ಹೀಗೆಯೇ ವಿಭಿನ್ನ ವ್ಯಕ್ತಿತ್ವದವರಿರುತ್ತಾರೆ. ಪ್ರತಿನಿತ್ಯ ಹೊಸದನ್ನು ವೀಕ್ಷಿಸುವ ಮನುಷ್ಯನೂ ಜೀವನದ ಸಫಲತೆಗಾಗಿ ಪ್ರಯತ್ನಿಸಬೇಕು. ಭೋಗಜೀವಿತದಲ್ಲಿ ಮುಳುಗೇಳುವ ಕಾಲಯಾಪನೆಯಷ್ಟೇ ಜೀವನವಾಗಬಾರದು.

ಆರೋಗ್ಯಕರವಾಗಿ ಬೆಳೆದ ಭತ್ತದ ಸಸಿಯಲ್ಲಿ ಹಾಲ್ದೆನೆ ಮೂಡುತ್ತದೆ. ಲೋಕ ವಿಚಾರಗಳನ್ನು ಗಮನಿಸುತ್ತ, ಬಾಹ್ಯ ಅನುಭವಗಳಿಂದ ಅಂತರಂಗದಲ್ಲಿ ಮೂಡುವ ಭಾವನೆಗಳು, ಮನಸ್ಸು-ಬುದ್ಧಿಗಳ ಸಂಯೋಗದಲ್ಲಿ ರೂಪು ತಳೆವ ನಿರ್ಧಾರಗಳು, ತತ್ಪಲವಾಗಿ ಬೆಳೆವ ಕನಸು-ಕಲ್ಪನೆಗಳು ಭತ್ತದ ಹಾಗೆಯೇ. ಜೀವನಾನುಭವದಲ್ಲಿ ಪಕ್ವವಾಗುತ್ತವೆ. ಹೀಗೆ ಪಕ್ವಗೊಂಡ ಅನುಭವದ ಕಾಳನ್ನು ವಿಚಾರ-ಯುಕ್ತಿಗಳಿಂದ ಕುಟ್ಟಿದರೆ ತತ್ತ್ವವೆಂಬ ಸತ್ತ್ವಯುತ ಅಕ್ಕಿಕಾಳು ಲಭ್ಯವಾಗುತ್ತದೆ. ಸ್ವ-ಅನುಭವವನ್ನು ವಿವೇಚನೆಯ ಕಡೆಗೋಲಿನಲ್ಲಿ ಮಥಿಸಿ, ಸ್ವೀಕರಿಸಿದ ತತ್ತ್ವವೇ ಜೀವನಕ್ಕೆ ನಿತ್ಯಪೋಷಣೆಯನ್ನು ನೀಡುತ್ತದೆ.

ಹಿರಿಯರು ಅನುಸರಿಸಿದರೆಂದೋ, ಇನ್ಯಾರೋ ಹೇಳಿದರೆಂದೋ ತತ್ತ್ವವೊಂದನ್ನು ಸ್ವೀಕರಿಸಿದರೆ ಅದು ಆಂತರ್ಯಕ್ಕಿಳಿಯದು. ಅನುಭವವೇ ಬೇರೆ, ಅರಿತ ವಿಚಾರಗಳೇ ಬೇರೆ ಎಂದಾದರೆ ಯಾವ ತತ್ತ್ವಾನುಸಂಧಾನವೂ ಸಾಧ್ಯವಿಲ್ಲ. ಇದರಿಂದಾಗಿ ನಿತ್ಯದ ಜೀವನವು ಆಮೋದ-ಪ್ರಮೋದಗಳಲ್ಲಿ ಮುಗಿದುಹೋಗುತ್ತದೆ. ಜೀವನವನ್ನು ಅರ್ಥಪೂರ್ಣವಾಗಿಸಬೇಕು, ಜೀವೋನ್ನತಿಗಾಗಿ ಶ್ರಮಿಸಬೇಕೆನ್ನುವ ಯೋಚನೆಯೂ ಮೂಡಲಾರದು.

ಪ್ರಪಂಚದ ಘಟನೆಗಳನ್ನು ವೀಕ್ಷಿಸುತ್ತ ಅದಕ್ಕೆ ತನ್ನ ಅನುಭವದ ಮಿತಿಯಲ್ಲೇ ಸ್ಪಂದಿಸುವ ವ್ಯಕ್ತಿ ಹೊಸ ಅರಿವನ್ನು ಪಡೆಯುತ್ತಾನೆ. ಆ ಅನುಭವದ ಆಧಾರದಲ್ಲಿ ಅವನೊಳಗೆ ಹಲವು ಭಾವನೆ, ಕನಸು-ಕಲ್ಪನೆಗಳು ಬೆಳೆಯುತ್ತವೆ. ಅವುಗಳೇ ಅಕ್ಷರ ರೂಪದಲ್ಲೋ, ಮಾತಿನ ಮೂಲಕವೋ ಅಭಿವ್ಯಕ್ತಗೊಳ್ಳುವುದುಂಟು. ಇದುವೇ ಚಿತ್ತದ ನಿಜ ಸತ್ತ್ವ.

ಅನುಭವಸಾಮಗ್ರಿಯಿಂದ ಇದು ಬಲಗೊಳ್ಳಬಹುದು. ಇದಕ್ಕೆ ತರ್ಕ, ಯುಕ್ತ ವಿಚಾರವು ಸೋಕಿದರೆ ತತ್ತ್ವ-ಸಿದ್ಧಾಂತ ರೂಪುಗೊಳ್ಳುತ್ತದೆ. ಹೀಗೆ ವ್ಯಕ್ತಿಯ ಅನುಭವದ ಆಧಾರದಲ್ಲಿ ಮೂಡಿದ ತತ್ತ್ವ-ಸಿದ್ಧಾಂತಗಳು ಆತನ ಜೀವನಕ್ಕೆ ಸಾರ್ಥಕತೆ ತರುತ್ತವೆ. ಬದುಕಿನ ಪ್ರತಿ ಹಂತದಲ್ಲೂ ತತ್ತ್ವ ವಿಚಾರಗಳನ್ನು ಮಥಿಸುತ್ತ, ದೋಷಗಳನ್ನು ಕಳಚಿಕೊಳ್ಳುತ್ತ ಜೀವನಯಾತ್ರೆಯಲ್ಲಿ ಮುಂದೆ ಸಾಗುವವನೇ ನಿಜಸಾಧಕ. ಆತನ ಪ್ರಯಾಣವು ನಿರಾತಂಕವಾಗಿ ಗುರಿಯನ್ನು ತಲುಪುತ್ತದೆ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net