

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಈ ಬಾರಿ ನಿರೀಕ್ಷೆಗೂ ಮೀರಿದ ಪ್ರವಾಸಿಗರು ಆಗಮಿಸಿದ್ದರಿಂದ ‘ಪ್ರವಾಸೋದ್ಯಮ’ಕ್ಕೆ ಕೊಂಚ ಪ್ರಮಾಣದಲ್ಲಿ ಬೂಸ್ಟರ್ ದೊರೆತಂತಾಗಿದೆ.
ಪ್ರತಿ ವರ್ಷವೂ ದಸರೆಯಲ್ಲಿ ವಿದೇಶಿಗರು ಹಾಗೂ ಅನ್ಯರಾಜ್ಯಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ವಿದೇಶಿಯರು ಹಾಗೂ ಅನ್ಯ ರಾಜ್ಯಗಳ ಪ್ರವಾಸಿಗರ ಸಂಖ್ಯೆ ಕಡಿಮೆ ಕಂಡುಬಂದರೂ ನಮ್ಮ ರಾಜ್ಯದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಇದರಿಂದ ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ಪಂಚತಾರಾ ಹೋಟೆಲ್‌ವರೆಗೂ ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದವರಿಗೆ ಈ ಬಾರಿಯ ದಸರಾ ಆರ್ಥಿಕವಾಗಿ ಲಾಭ ತಂದುಕೊಟ್ಟಿದೆ.
ವಿಶೇಷವೆಂದರೆ ಈ ಬಾರಿ ಅರಮನೆ, ಮೃಗಾಲಯಗಳಿಗೂ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇಂದಿಗೂ ನಗರದಲ್ಲಿ ದಸರಾ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದು, ವಸ್ತುಪ್ರದರ್ಶನಕ್ಕೆ ಸಾವಿರಾರು ಜನರು ಭೇಟಿ ನೀಡುತ್ತಿದ್ದಾರೆ. ಇದರಿಂದ ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರು, ಕಾರು ಚಾಲಕರು, ಟಾಂಗಾವಾಲಾಗಳು ಮತ್ತು ಸಣ್ಣಪುಟ್ಟ ವ್ಯಾಪ್ಯಾರಿಗಳ ಜೇಬು ತುಂಬುತ್ತಿದೆ. ಒಟ್ಟಾರೆ ಈ ಬಾರಿಯ ದಸರಾ ಮಹೋತ್ಸವ ಯಶಸ್ವಿಯಾಗಿದ್ದು, ಪ್ರವಾಸಿಗರ ಆಗಮನ ಮತ್ತು ವ್ಯಾಪಾರ ವಹಿವಾಟಿನ ಬಗ್ಗೆ ‘ವಿಜಯವಾಣಿ’ ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.