ದಸರಾ ಯುವ ಸಂಭ್ರಮ: ನಟ ಶ್ರೀಮುರಳಿ, ನಟಿ ರುಕ್ಮಿಣಿ ವಸಂತ್ ವಿಶೇಷ ಆಹ್ವಾನಿತರು

12
Published on

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಆರಂಭಕ್ಕೂ ಮುನ್ನವೇ ಯುವ ಸಮುದಾಯಕ್ಕೆ ಜೋಶ್ ನೀಡುವ ‘ಯುವ ಸಂಭ್ರಮ’ಕ್ಕೆ ಸೆ. 24 ರಂದು ಸಂಜೆ 6 ಗಂಟೆಗೆ ಚಾಲನೆ ಸಿಗಲಿದೆ. ವಿದ್ಯಾಕಾಶಿ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ 8 ದಿನಗಳ ಕಾಲ ಯುವ ಸಂಭ್ರಮ ಯುವ ಸಮುದಾಯದಲ್ಲಿ ರಂಗು ತುಂಬಲಿದೆ.
ವಿಶ್ವವಿಖ್ಯಾತ ಮೈಸೂರು ದಸರೆಗೂ, ಯುವ ಸಂಭ್ರಮಕ್ಕೂ ಅವಿನಾಭಾವ ಸಂಬಂಧ. ದಸರಾ ಬಂತೆಂದರೆ ಯುವ ಪ್ರತಿಭೆಗಳಿಗೆ ಏನೋ ಸಂಭ್ರಮ. ರಾಜ್ಯದ ಮೂಲೆ ಮೂಲೆಯ ಕಾಲೇಜುಗಳಿಂದ ಸಾಂಸ್ಕೃತಿಕ ನಗರಿಗೆ ಆಗಮಿಸುವ ಯುವಕ, ಯುವತಿಯರು ಬಯಲು ರಂಗಮಂದಿರದಲ್ಲಿ ನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾಸಕ್ತರಿಗೆ ರಸದೌತಣ ನೀಡುತ್ತವೆ. ಕಾರ್ಯಕ್ರಮಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಟ ಶ್ರೀಮುರಳಿ ಮತ್ತು ನಟಿ ರುಕ್ಮಿಣಿ ವಸಂತ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಘನ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.
ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನಿಲ್ ಬೋಸ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್.ತಂಗಡಗಿ, ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಶಾಸಕರಾದ ಕೆ.ಹರೀಶ್‌ಗೌಡ, ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಶ್ರೀವತ್ಸ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net