3 ರಿಂದ 6ರವರೆಗೆ ದಸರಾ ಮುಖ್ಯಮಂತ್ರಿ ಕಪ್

sportsday
Sports, set of athletes of various sports disciplines. Isolated vector silhouettes. Run, soccer, hockey, volleyball, basketball, rugby, baseball, american football, cycling, golf
Published on

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅ.3 ರಿಂದ 6 ರವರೆಗೆ ರಾಜ್ಯಮಟ್ಟದ ‘ದಸರಾ ಮುಖ್ಯಮಂತ್ರಿ ಕಪ್’ ಕ್ರೀಡಾಕೂಟ ಆಯೋಜಿಸಲಾಗಿದೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ, ದಸರಾ ಕ್ರೀಡಾ ಉಪ ಸಮಿತಿಯ ಕಾರ್ಯಾಧ್ಯಕ್ಷ ಡಾ.ಜಿತೇಂದ್ರ ಶೆಟ್ಟಿ ಮಾಹಿತಿ ನೀಡಿದರು.
ಅ.3 ರಂದು ಸಂಜೆ 4.30 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್ ಸೇಠ್ ಸೇರಿದಂತೆ ಜಿಲ್ಲೆಯ ಎಲ್ಲ ಜನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣ, ಡಿ.ದೇವರಾಜ ಅರಸು ಕುಸ್ತಿ ಅಖಾಡ, ಮೈಸೂರು ವಿವಿ ವಿವಿಧ ಕ್ರೀಡಾಂಗಣ ಸೇರಿದಂತೆ ನಗರದ ನಾನಾ ಕಡೆ ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಜಿಮ್ನಾಸ್ಟಿಕ್ಸ್, ಹಾಕಿ, ಕಬಡ್ಡಿ, ಖೋ-ಖೋ, ಈಜು, ವಾಲಿಬಾಲ್, ಥ್ರೋಬಾಲ್, ಹ್ಯಾಂಡ್‌ಬಾಲ್, ಭಾರ ಎತ್ತುವುದು, ಚೆಸ್, ದೇಹದಾರ್ಢ್ಯ, ಬಾಕ್ಸಿಂಗ್ ಪಂದ್ಯಾವಳಿ ನಡೆಯಲಿವೆ. ಎನ್‌ಐಇ ಕಾಲೇಜು ಮೈದಾನದಲ್ಲಿ ಬಾಲ್ ಬ್ಯಾಡ್ಮಿಂಟನ್, ಕುಸ್ತಿ, ಟೆನಿಸ್, ಶೂಟಿಂಗ್, ಯೋಗ, ನೆಟ್‌ಬಾಲ್, ಆರ್ಚರಿ, ವುಶು, ಟೇಬಲ್ ಟೆನಿಸ್ ಸೇರಿದಂತೆ ನಾನಾ ಕ್ರೀಡೆಗಳು ನಡೆಯಲಿವೆ ಎಂದರು.
ಈ ಬಾರಿಯೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಮೈಸೂರು, ಬೆಳಗಾವಿ ಎಂಬ 5 ವಿಭಾಗಗಳನ್ನು ರಚಿಸಲಾಗಿದೆ. ವಿಭಾಗ ಮಟ್ಟದದಲ್ಲಿ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗಲಿದೆ ಎಂದು ತಿಳಿಸಿದರು.
ಪ್ರತಿ ವಿಭಾಗಕ್ಕೆ ತಲಾ 7 ಅಥವಾ 8 ಜಿಲ್ಲೆಗಳನ್ನು ಸೇರಿಸಲಾಗಿದೆ. ಮೈಸೂರು ವಿಭಾಗದಲ್ಲಿ ಮಂಗಳೂರು, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ಮಂಡ್ಯ, ಮೈಸೂರು ಜಿಲ್ಲೆಗಳಿವೆ. ಬೆಂಗಳೂರು ನಗರ ವಿಭಾಗಕ್ಕೆ ಬೆಂಗಳೂರು ನಗರ ಜಿಲ್ಲೆಯನ್ನು ಮಾತ್ರ ಸೇರಿಸಲಾಗಿದೆ. ಒಟ್ಟು ಎಲ್ಲ ವಿಭಾಗಗಳಿಂದ 4 ಸಾವಿರಕ್ಕೂ ಹೆಚ್ಚಿನ ಕ್ರೀಡಾಪಟುಗಳು, 800 ತಾಂತ್ರಿಕ ಸಿಬ್ಬಂದಿ ಭಾಗವಹಿಸಿದ್ದಾರೆ. ಎಲ್ಲ ಕ್ರೀಡಾಪಟುಗಳಿಗೂ ವಸತಿ, ಊಟೋಪಹಾರ, ಸಾರಿಗೆ, ವೈದ್ಯಕೀಯ ವ್ಯವಸ್ಥೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ, ದಸರಾ ಕ್ರೀಡಾ ಉಪ ಸಮಿತಿಯ ಕಾರ್ಯದರ್ಶಿ ಭಾಸ್ಕರ್ ನಾಯಕ್, ಮುಖ್ಯ ತರಬೇತುದಾರ ಡಾ.ವಸಂತ್‌ಕುಮಾರ್, ಸುಂದರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net