

‘ಕಾರ್ಗಿಲ್ ರಣಭೂಮಿಯಲ್ಲಿ ಭಾರತ ಪಾಕಿಸ್ತಾನವನ್ನು ಬಗ್ಗುಬಡಿದು ದಿಗ್ವಿಜಯ ಸಾಧಿಸಿದ ಮಹಾದಿನಕ್ಕೆ ಇಂದಿಗೆ ಬರೋಬ್ಬರಿ 21 ವರ್ಷ. ‘ಆಪರೇಷನ್ ವಿಜಯ್’ ಹೆಸರಲ್ಲಿ ಪಾಕಿಸ್ತಾನದ ವಿರುದ್ಧ 1999ರಲ್ಲಿ ಭಾರತೀಯ ಸೇನೆ ಸುಮಾರು 60 ದಿನಗಳ ಕಾರ್ಯಾಚರಣೆ ನಡೆಸಿತ್ತು. ಅದರಲ್ಲಿ ಭಾರತ ವಿಜಯ ಸಾಧಿಸುವುದರೊಂದಿಗೆ ಜುಲೈ 26ರಂದು ಯುದ್ಧ ಕೊನೆಗೊಂಡಿತ್ತು. ಯುದ್ಧದಲ್ಲಿ ಪಾಲ್ಗೊಂಡು ವಿಜಯದುಂದುಭಿ ಮೊಳಗಿಸಿದ ಕರ್ನಾಟಕದ ವೀರಯೋಧರು ತಮ್ಮ ಆ ರಣರೋಚಕ ಅನುಭವಗಳನ್ನು ವಿಜಯವಾಣಿ ಓದುಗರಿಗಾಗಿ ಹಂಚಿಕೊಂಡಿದ್ದಾರೆ.
ಸೈನಿಕರಿಗೆ ಬೇಕಾಗುವ ಶಸ್ತ್ರಾಸ್ತ್ರಗಳನ್ನು ಶ್ರೀನಗರದಿಂದ ಒಂದೇ ಮಾರ್ಗದಲ್ಲಿ ಪೂರೈಸಲಾಗುತ್ತಿತ್ತು. ವಾಹನಗಳ ಬೆಂಗಾವಲು ಪಡೆಯಲ್ಲಿ ಮೆಟೀರಿಯಲ್ಸ್ ಪ್ರೊಟೆಕ್ಷನ್ ಡ್ಯೂಟಿಗೆ ನನ್ನನ್ನು ನಿಯೋಜಿಸಲಾಗಿತ್ತು. ಸಮುದ್ರ ಮಟ್ಟದಿಂದ 13,000 ಅಡಿ ಎತ್ತರದವರೆಗೆ ನಮ್ಮ ವಾಹನಗಳು ಹೋಗುತ್ತಿದ್ದವು. ಮೇಲೆ ಬೆಟ್ಟದಲ್ಲಿ ದುಷ್ಮನ್, ತಳಭಾಗದಲ್ಲಿ ನಾವು ಸಾಗುತ್ತಿದ್ದೆವು. ಪಾಕಿಸ್ತಾನ ಸೈನಿಕರನ್ನು ಸದೆಬಡಿಯಲು ನಮ್ಮ ಸೈನಿಕರು ರಾತ್ರಿ ತೆವಳುತ್ತ ಸಾಗುತ್ತಿದ್ದರು. ಅಂತಿಮವಾಗಿ ಭಾರತ 1999ರ ಜು.26ರಂದು ಪಾಕಿಸ್ತಾನ ಸೈನಿಕರನ್ನು ಹಿಮ್ಮೆಟ್ಟಿಸಿತು. ಯುದ್ಧ ಮುಗಿದ ನಂತರವೂ 3 ತಿಂಗಳು ನಾನು ಅಲ್ಲೇ ಕರ್ತವ್ಯದಲ್ಲಿದ್ದೆ. 2009ರಲ್ಲಿ ಬೆಳಗಾವಿಯಲ್ಲಿ ಜೂನಿಯರ್ ಕಮಾಂಡೋ ಟ್ರೇನಿಂಗ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದಾಗ ಜಂಗಲ್ ಟ್ರೇನಿಂಗ್ ಡೆಮೊ ವೇಳೆ ಸಣ್ಣ ಬಾಂಬ್ ಸಿಡಿದು ಬಲಗೈ ತೋರುಬೆರಳಿಗೆ ಗಾಯವಾಗಿತ್ತು. ಸೇನಾ ಸೇವೆ ನಂತರ ಪೊಲೀಸ್ ಇಲಾಖೆ ಸೇರಬೇಕೆಂಬ ಕನಸು, ಬೆರಳಿನ ಗಾಯದಿಂದಾಗಿ ಈಡೇರಲಿಲ್ಲ.
| ಭೀಮಪ್ಪ ಜಾಧವ ಪುಡಕಲಕಟ್ಟಿ, ಧಾರಾವಡ (ಸದ್ಯ ಮಾದನಬಾವಿ ಕೆವಿಜಿ ಬ್ಯಾಂಕ್ನಲ್ಲಿ ಗುಮಾಸ್ತ)