ಪ್ರೇಕ್ಷಕರ ಮನ ಗೆದ್ದ ಜೈ ಶ್ರೀರಾಮ್ ನಾಟಕ

14bhr 2 nataka
ಬಾಳೆಹೊನ್ನೂರು ರೇಣುಕನಗರದ ವಿಘ್ನೇಶ್ವರ ಕಲಾ ಬಳಗದ ಜೈ ಶ್ರೀರಾಮ್ ನಾಟಕದ ದೃಶ್ಯ.
Published on

ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ಶರನ್ನವರಾತ್ರಿ ಮಹೋತ್ಸವದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ರೇಣುಕನಗರದ ವಿಘ್ನೇಶ್ವರ ಕಲಾ ಬಳಗದ ಹವ್ಯಾಸಿ ಕಲಾವಿದರು ಪ್ರದರ್ಶಿಸಿದ ಜೈ ಶ್ರೀರಾಮ್ ನಾಟಕ ಪ್ರೇಕ್ಷಕರ ಮನಗೆದ್ದಿತು.
ನಿರ್ದೇಶಕ ಬಿ.ಜಗದೀಶ್ಚಂದ್ರ ನಿರ್ದೇಶನದಲ್ಲಿ ಸತ್ಯಕಥೆ ಆಧಾರಿತವಾಗಿ ರಚನೆಗೊಂಡ ಜೈ ಶ್ರೀರಾಮ್ ನಾಟಕದಲ್ಲಿ ಪ್ರಮುಖವಾಗಿ ಮಲೆನಾಡಿನ ಪಟೇಲರು ಹಾಗೂ ಅವರ ಶಿಷ್ಯ ಸಿದ್ದನ ಪಾತ್ರವು ಪ್ರೇಕ್ಷಕರ ಗಮನ ಸೆಳೆಯಿತು. ಮಲೆನಾಡಿನಲ್ಲಿ ದೀಪಾವಳಿ ಸಂದರ್ಭದಲ್ಲಿ ನಡೆಯುವ ವಿವಿಧ ಆಚರಣೆಗಳನ್ನು ತೋರಿಸಲಾಯಿತು. ದೀಪಾವಳಿ ವೇಳೆ ನಡೆಯುವ ಹುಲಿ ಕುಣಿತ, ಕೊರಗ ನೃತ್ಯ, ಜಾನಪದ ಹಾಡುಗಳನ್ನು ನೈಜವಾಗಿ ಪ್ರದರ್ಶಿಸಲಾಯಿತು.
ಯುವಜನರು ತಮ್ಮ ಪಾಲಕರು ವೃದ್ಧಾಪ್ಯಕ್ಕೆ ತಲುಪಿದಾಗ ಹೇಗೆ ನೋಡಿ ಕೊಳ್ಳುತ್ತಾರೆ? ಅವರ ವರ್ತನೆ ಹೇಗಿರುತ್ತದೆ ಎಂಬುದನ್ನು ಸಹ ಮನಸ್ಸಿಗೆ ನಾಟುವಂತೆ ಕಲಾವಿದರು ಅಭಿನಯಿಸಿ ತೋರಿಸಿದರು.
ಅಯೋಧ್ಯೆಯ ಶ್ರೀರಾಮ ಮಂದಿರದ ರಾಮಲಲ್ಲಾ ಮೂರ್ತಿಗೆ ಕರ್ನಾಟಕದಿಂದ ತೆಗೆದುಕೊಂಡು ಹೋದ ಕಲ್ಲು ಮೂರ್ತಿ ರೂಪ ಪಡೆದ ಬಗ್ಗೆ ವಿಶೇಷವಾಗಿ ಪ್ರಸ್ತುತಪಡಿಸಲಾಯಿತು. ಅಯೋಧ್ಯೆ ಮಾದರಿಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೊಳ್ಳುವುದನ್ನು ವಿಶೇಷ ಮಾದರಿಯಲ್ಲಿ ಪ್ರದರ್ಶಿಸಲಾಯಿತು.
ನಾಟಕದಲ್ಲಿ ಆರ್.ಡಿ.ಮಹೇಂದ್ರ, ಬಿ.ಜಗದೀಶ್ಚಂದ್ರ, ಸಿ.ಎಸ್.ಮಹೇಶ್ಚಂದ್ರ, ರವೀಂದ್ರ ಆಚಾರ್ಯ, ಅರುಣ್‌ಕುಮಾರ್, ಪಿ.ಕೆ.ಪ್ರಕಾಶ್ ಬನ್ನೂರು, ಉಮೇಶ್, ಭೂಮಿಕಾ ಆಚಾರ್ಯ, ಭುವನ, ಸಚಿನ್‌ಕುಮಾರ್, ಕಿರಣ್‌ಕುಮಾರ್, ಮಂಜು ಹೊಳೆಬಾಗಿಲು, ಇಂದುಜಾ, ಇಶಾನ್, ಕಿಶನ್, ಆನಂದ್, ಕಾರ್ತಿಕ್, ಪ್ರತೀಕ್, ಸಾಮ್ರಾಟ್ ಅಭಿನಯಿಸಿದರು.
ಸ್ಫೂರ್ತಿ, ನಿಶ್ಚಿತ, ತನುಶ್ರೀ, ಹಿತೈಶಿ, ನಿನಾದ, ಸನ್ಯಂ, ಮಿಶಿಕಾ, ಮಿಷಾ, ಹಿರಣ್ಯ, ಸಾನ್ವಿಕ, ನಿರುಕ್ತ ನಾಟಕದ ನೃತ್ಯದಲ್ಲಿದ್ದರು. ದೀಪಾವಳಿಯ ಜಾನಪದ ಹಾಡಿಗೆ ರತ್ನಮ್ಮ ಶೇಷಯ್ಯ, ಹಾಲಮ್ಮ ಕಾಳಯ್ಯ ದನಿಯಾದರು. ರಂಗಸಜ್ಜಿಕೆಯಲ್ಲಿ ಮಂಜುನಾಥ್ ಆಚಾರ್ಯ, ಪ್ರೇಮ್‌ಕುಮಾರ್, ಭುವನ್, ಯೋಗೀಶ್ ಆಚಾರ್ಯ, ಮಂಜು ಹಲಸೂರು, ಸಂದೀಪ್ ಶೆಟ್ಟಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net