

| ಬಸವರಾಜ ಇದ್ಲಿ ಹುಬ್ಬಳ್ಳಿ
ನಾಡಹಬ್ಬ ದಸರಾ ಆಚರಣೆಗೆ ಸಜ್ಜಾಗಿರುವ ರಾಜ್ಯದ ಜನತೆಗೆ ಆಹಾರ ಪದಾರ್ಥಗಳ ಬೆಲೆ ಏರಿಕೆಯ ಆಘಾತ ತಟ್ಟಿದೆ. ನವರಾತ್ರಿ ಅಂಗವಾಗಿ ಒಂದೊಂದು ದಿನ ಒಂದೊಂದು ಖಾದ್ಯ ಸಿದ್ಧಪಡಿಸಿ ದುರ್ಗಾದೇವಿ ಆರಾಧಿಸುವುದು ವಾಡಿಕೆ. ಆದರೆ ಆಹಾರ ಧಾನ್ಯಗಳ ಜತೆಗೆ ಖಾದ್ಯ ತೈಲ ದರವೂ ಹೆಚ್ಚಳವಾಗಿರುವುದು ಸಂಭ್ರಮಕ್ಕೆ ಬರೆ ಎಳೆದಿದೆ.
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ಗೋವಾಗೆ ಆಹಾರ ಧಾನ್ಯ ಹಾಗೂ ದಿನಸಿ ಸಗಟು ಪೂರೈಕೆ ಮಾಡುವ ಹುಬ್ಬಳ್ಳಿ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿದೆ. ಮುಕ್ತ ಮಾರುಕಟ್ಟೆ ಮೇಲೂ ಇದರ ಪರಿಣಾಮ ಗೋಚರಿಸಿದೆ. ರಾಜಧಾನಿ ಬೆಂಗಳೂರಿನ ಎಪಿಎಂಸಿಗಳಲ್ಲೂ ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದೆ.
ಹಬ್ಬಕ್ಕೆ ವಿಶೇಷವಾಗಿ ಬೇಕಾದ ಅಡುಗೆ ಎಣ್ಣೆ ದರ ಲೀಟರ್ಗೆ 100 ರೂ.ಇತ್ತು. ಅದೀಗ 130 ರೂ.ಗೆ ಏರಿಕೆ ಆಗಿದೆ. ಇದು ಸಗಟು ದರವಾದರೆ, ಮುಕ್ತ ಮಾರುಕಟ್ಟೆಯಲ್ಲಿ 140- 150 ರೂ.ಗೆ ಲೀಟರ್ ಮಾರಾಟವಾಗುತ್ತಿದೆ. ಲೀಟರ್ಗೆ ಪಾಮ್ಯಿುಲ್ 95 ರೂ. ಇದ್ದದ್ದು, ಈಗ 120 ರೂ.ಗೆ ನೆಗೆತ ಕಂಡಿದೆ. ಸೂಪರ್ ಮಾರ್ಕೆಟ್ಗಳಲ್ಲೂ ಅಡುಗೆ ಎಣ್ಣೆ ದರ ತುಸು ಹೆಚ್ಚಿಸಲಾಗಿದೆ. ದಸರಾ ಆಚರಣೆ ವೇಳೆ ದೇವಾಲಯಗಳಲ್ಲಿ ಪ್ರಸಾದ ಹಾಗೂ ಅನ್ನಸಂತರ್ಪಣೆ ಇರುವುದರಿಂದ ಆಯೋಜಕರಿಗೂ ದರ ಏರಿಕೆಯ ಬಿಸಿ ತಟ್ಟಲಿದೆ ಎಂಬುದು ಖಾಸಗಿ ದೇಗುಲ ಸಮಿತಿಯ ಪದಾಧಿಕಾರಿಗಳ ಅನಿಸಿಕೆ.
ಬೆಳ್ಳುಳ್ಳಿ ಬೆಲೆ ಸ್ಥಿರ: ಕಳೆದೆರಡು ತಿಂಗಳಿನಿಂದ ಗಗನಮುಖಿಯಾಗಿರುವ ಬೆಳ್ಳುಳ್ಳಿ ಬೆಲೆಯಲ್ಲಿ ಸದ್ಯ ಸ್ಥಿರತೆ ಕಂಡಿದೆ. ಜತೆಗೆ ಈರುಳ್ಳಿ ಆವಕದಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ದರ ಕೊಂಚ ಕಡಿಮೆ ಆಗಬಹುದೆಂದು ಹೇಳಲಾಗುತ್ತಿದೆ.
ಅಕ್ಕಿ, ಬೆಲೆ ಏರಿಲ್ಲ: ಸಮಾಧಾನದ ಸಂಗತಿ ಎಂದರೆ ಅಕ್ಕಿ, ತೊಗರಿಬೇಳೆ, ಉದ್ದಿನಬೇಳೆ, ಬಿಳಿ ಬಠಾಣಿ, ಹೆಸರು, ಹೆಸರುಬೇಳೆ ದರಗಳು ಮೊದಲಿಗಿಂತ ಒಂದೆರಡು ರೂಪಾಯಿ ಕಡಿಮೆಯಾಗಿವೆ.
ಇಳಿಕೆಯತ್ತ ಟೊಮ್ಯಾಟೋ: ಟೊಮ್ಯಾಟೋ ಆವಕದಲ್ಲೂ ಶೇ. 40 ಕೊರತೆ ಇದೆ. ಆದರೆ ಮುಂದಿನ ಮೂರ್ನಾಲ್ಕು ದಿನದಲ್ಲಿ ಪ್ರತಿ ಕೆಜಿ ದರ -ಠಿ;4-5 ಇಳಿಕೆ ಕಾಣಬಹುದು ಎಂದು ಮಾರುಕಟ್ಟೆ ಪರಿಣಿತರು ಅಂದಾಜಿಸಿದ್ದಾರೆ.
ಗೋಡಂಬಿ ಕೆಜಿಗೆ 1000!: ಸಗಟು ಮಾರುಕಟ್ಟೆಯಲ್ಲಿ ಗೋದಿ ದರ 35 ರೂ. ಆದರೆ ಮುಕ್ತ ಮಾರುಕಟ್ಟೆಯಲ್ಲಿ 42 ರೂ.ನಂತೆ ಮಾರಾಟವಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ದಿನಸಿ ಪದಾರ್ಥಗಳು ಸಾಮಾನ್ಯಕ್ಕಿಂತ ಒಂದೆರಡು ರೂಪಾಯಿ ಹೆಚ್ಚಾಗಿವೆ. ಡ್ರೖೆ ಫ್ರೂಟ್ಸ್ ದರವೂ ಕೂಡ ಗಗನಮುಖಿಯಾಗಿವೆ. ದಸರಾ, ದೀಪಾವಳಿ ಎಂದರೆ ಬಹುತೇಕ ಕಡೆಗಳಲ್ಲಿ ಬಂಧು-ಬಾಂಧವರಿಗೆ, ಸ್ನೇಹಿತರಿಗೆ ಉಡುಗೊರೆಯಾಗಿ ದ್ರಾಕ್ಷಿ, ಗೋಡಂಬಿ, ಬಾದಾಮಿ ಇತ್ಯಾದಿಯನ್ನು ಕೊಡುವುದು ವಾಡಿಕೆ. ಆದರೆ, ಈ ಬಾರಿ ದರ ಹೆಚ್ಚಾಗಿ ಚಿಂತೆಗೀಡು ಮಾಡಿದೆ. ಬಾದಾಮಿ ಕೆಜಿಗೆ 850 ರೂ., ಗೋಡಂಬಿ 1,000 ರೂ.ಗೆ ತಲುಪಿದೆ.
ದೇಶೀಯವಾಗಿ ಸೂರ್ಯಕಾಂತಿ ಬೆಳೆ ಕಡಿಮೆ. ಹಾಗಾಗಿ ಬೇರೆ ರಾಷ್ಟ್ರಗಳಿಂದ ಸೂರ್ಯಕಾಂತಿ ಎಣ್ಣೆ ಬರುತ್ತದೆ. ಇದೀಗ ಸೂರ್ಯಕಾಂತಿ ಎಣ್ಣೆ ಆಮದು ಸುಂಕ ಹೆಚ್ಚಿಸಿರುವುದರಿಂದ ಬೆಲೆ ಹೆಚ್ಚಳವಾಗಿದೆ. ಗೋಧಿ, ಗೋಧಿ ಹಿಟ್ಟು ಸಹ ದುಬಾರಿಯಾಗಿದೆ. ಹೊಸ ಉತ್ಪನ್ನ ಮಾರುಕಟ್ಟೆಗೆ ಬರುತ್ತಿರುವುದರಿಂದ ಕೆಲವು ದಿನಸಿ ಉತ್ಪನ್ನಗಳ ದರ ಇಳಿಕೆಯಾಗಿದೆ. | ಅರ್ಜುನ ಅಗರವಾಲ್ ಹುಬ್ಬಳ್ಳಿ ಆಹಾರ ಧಾನ್ಯ ವರ್ತಕರ ಸಂಘದ ಕಾರ್ಯದರ್ಶಿ