

Durand Line: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ಗಂಭೀರ ಸಂಘರ್ಷ ಸಂಭವಿಸಿದ್ದು, ಗುರುವಾರ (ಅ.09), ಪಾಕಿಸ್ತಾನಿ ವಾಯುಪಡೆಯು ಕಾಬೂಲ್ ನಗರದ ಮೇಲೆ ನಡೆಸಿದ ದಾಳಿಗೆ ಇದೀಗ ತಾಲಿಬಾನ್ ದೇಶವು ಸೇಡು ತೀರಿಸಿಕೊಂಡಿದೆ. ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಹಿದಾ ಖಾದ್ರಿ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಈ ದಾಳಿಗಳು ನಡೆದಿರುವುದು ಸಂಘರ್ಷದ ಕಿಚ್ಚನ್ನು ದ್ವಿಗುಣಗೊಳಿಸಿದೆ.
ಶನಿವಾರ (ಅ.11) ರಾತ್ರಿಯಿಂದ, ಅಫ್ಘಾನ್ ತಾಲಿಬಾನ್ ಪಡೆಗಳು ಗಡಿಯುದ್ದಕ್ಕೂ ಪಾಕಿಸ್ತಾನಿ ಮಿಲಿಟರಿ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ಭೀಕರ ದಾಳಿಗಳನ್ನು ನಡೆಸುತ್ತಿವೆ. ಈ ದಾಳಿಗಳಲ್ಲಿ ಇಲ್ಲಿಯವರೆಗೆ 58 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಅಧಿಕಾರಿಗಳು ಹೇಳಿದ್ದಾರೆ. ಇದರೊಟ್ಟಿಗೆ 25 ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಅಲ್ಲಿಗೆ ತಾಲಿಬಾನ್ ದಾಳಿಗೆ ಪಾಕಿಸ್ತಾನ ನಡುಗಿ ಹೋಗಿದೆ ಎಂಬುದರಲ್ಲಿ ಅನುಮಾನವೇ ಬೇಡ.
ಆದಾಗ್ಯೂ, ಅಫ್ಘಾನ್-ಪಾಕ್ ಸಂಘರ್ಷ ನಿನ್ನೆ, ಮೊನ್ನೆಯದಲ್ಲ. ಇದಕ್ಕೆ 132 ವರ್ಷಗಳ ಇತಿಹಾಸವಿದೆ. ಎರಡೂ ದೇಶಗಳ ನಡುವಿನ ಗಡಿ ರೇಖೆಯಾದ "ಡ್ಯುರಾಂಡ್ ಲೈನ್" ಈ ಸಮಸ್ಯೆಗೆ ಮೂಲ ಕಾರಣ ಎಂದು ವರದಿ ತಿಳಿಸಿದೆ. ಸುಮಾರು 2,640 ಕಿಮೀ (1,640 ಮೈಲಿ) ಉದ್ದವಿರುವ ಡ್ಯುರಾಂಡ್ ರೇಖೆಯನ್ನು 1893ರಲ್ಲಿ ಆಗಿನ ಬ್ರಿಟಿಷ್ ಭಾರತೀಯ ವಿದೇಶಾಂಗ ಕಾರ್ಯದರ್ಶಿ ಸರ್ ಮಾರ್ಟಿಮರ್ ಡ್ಯುರಾಂಡ್ ಮತ್ತು ಅಫ್ಘಾನಿಸ್ತಾನದ ಆಡಳಿತಗಾರ ಅಮೀರ್ ಅಬ್ದುರ್ ರೆಹಮಾನ್ ಖಾನ್ ನಡುವಿನ ಒಪ್ಪಂದದ ಮೂಲಕ ಸ್ಥಾಪಿಸಲಾಯಿತು. ಈ ರೇಖೆಯು ಬ್ರಿಟಿಷ್ ಭಾರತ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿಯನ್ನು ವ್ಯಾಖ್ಯಾನಿಸಿತು. ಆದಾಗ್ಯೂ, ಈ ರೇಖೆಯು ಗಡಿಯಲ್ಲಿ ವಾಸಿಸುವ ಪಶ್ತೂನ್ ಮತ್ತು ಬಲೂಚ್ ಬುಡಕಟ್ಟುಗಳನ್ನು ವಿಭಜಿಸಿತು.
1893ರ ಡುರಾಂಡ್ ರೇಖೆಯನ್ನು ಅಫ್ಘಾನಿಸ್ತಾನ ಗುರುತಿಸುವುದಿಲ್ಲ. ತಾಲಿಬಾನ್ ಸೇರಿದಂತೆ ಹಿಂದಿನ ಅಫ್ಘಾನ್ ಆಡಳಿತಗಾರರು ತಮ್ಮ ಪಶ್ತೂನ್ ಬುಡಕಟ್ಟು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿದೆ, ಇದು ಅಫ್ಘಾನಿಸ್ತಾನಕ್ಕೆ ಸೇರಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಪಾಕಿಸ್ತಾನ ಮಾತ್ರ ಇದಕ್ಕೆ ಒಪ್ಪುವುದಿಲ್ಲ. ಅಂದಿನಿಂದಲೂ ಇದೊಂದು ವಿವಾದವಾಗಿ ಮಾರ್ಪಟ್ಟಿದ್ದು, ಸಂರ್ಘಷದ ಹಾದಿಯಲ್ಲೇ ಸಾಗಿದೆ.
ಡ್ಯುರಾಂಡ್ ರೇಖೆಯು ನಕ್ಷೆಯಲ್ಲಿನ ಒಂದು ರೇಖೆಯಲ್ಲ. ಇದು ದಕ್ಷಿಣ ಏಷ್ಯಾದ ಅತ್ಯಂತ ವಿವಾದಿತ ಪ್ರದೇಶಗಳಲ್ಲಿ ಒಂದು ಎಂದು ಹೇಳಲಾಗಿದೆ. ಪಾಕಿಸ್ತಾನವು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯವನ್ನು ತನ್ನದೇ ಎಂದು ಹೇಳಿಕೊಳ್ಳುತ್ತದೆ. ಮತ್ತೊಂದೆಡೆ, ಅಫ್ಘಾನಿಸ್ತಾನವು ಇದನ್ನು ಅನ್ಯಾಯವೆಂದು ಹೇಳುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಫ್ಘಾನ್-ಪಾಕಿಸ್ತಾನ ಪಡೆಗಳು ಗಡಿಯಲ್ಲಿ ಆಗಾಗ್ಗೆ ಗುಂಡಿನ ಚಕಮಕಿ ನಡೆಸುತ್ತವೆ. ಅರೇಬಿಯನ್ ಸಮುದ್ರಕ್ಕೆ ಪ್ರವೇಶವನ್ನು ಒದಗಿಸುವ ಬಲೂಚಿಸ್ತಾನ್ ಸೇರಿದಂತೆ ಪಶ್ತೂನ್ ಪ್ರದೇಶಗಳನ್ನು ಹಿಂದಿರುಗಿಸಲು ಅಫ್ಘಾನಿಸ್ತಾನ ಬಯಸುತ್ತದೆ. 2017ರಲ್ಲಿ ಪಾಕ್ ಗಡಿಯಲ್ಲಿ ತಡೆಗೋಡೆ ನಿರ್ಮಿಸಿದಾಗ ಈ ವಿವಾದ ಇನ್ನಷ್ಟು ಉಲ್ಬಣಗೊಂಡಿತು,(ಏಜೆನ್ಸೀಸ್).