

ಬೆಂಗಳೂರು: ಕರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆಯಾಗಿ ಅನುಷ್ಠಾನಕ್ಕೆ ಬರುತ್ತಿದ್ದಂತೆ, ನಕಲಿ ಮಾಸ್ಕ್, ಕಳಪೆ ಸ್ಯಾನಿಟೈಸರ್ ಮುಂತಾದವುಗಳನ್ನು ಉತ್ಪಾದಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇದೇ ರೀತಿ ನಕಲಿ ಮಾಸ್ಕ್ ತಯಾರಿಸಿ 1 ಕೋಟಿ ರೂಪಾಯಿಗೂ ಅಧಿಕ ಹಣ ಸಂಪಾದಿಸಿದವರು ಈಗ ಪೊಲೀಸರ ಅತಿಥಿಗಳು!
ಖಚಿತ ಮಾಹಿತಿ ಆಧರಿಸಿ ಬೆಂಗಳೂರಿನ ಸಿಸಿಬಿ ಪೊಲೀಸರು ಸೋಮವಾರ ಕಲ್ಯಾಣ ನಗರದ ಎಚ್ಆರ್ಬಿಆರ್ ಲೇಔಟ್ನಲ್ಲಿನ ಗೋಡೌನ್ ಒಂದರಲ್ಲಿ ಶೇಖರಿಸಿ ಇರಿಸಲಾಗಿದ್ದ 12,300 ನಕಲಿ ಎನ್-95 ಮಾಸ್ಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಅಂದಾಜು ಮೌಲ್ಯ 20 ಲಕ್ಷ ರೂಪಾಯಿ. ಇದಕ್ಕೂ ಮೊದಲೇ ಆರೋಪಿಗಳು 70,000 ನಕಲಿ ಮಾಸ್ಕ್ಗಳನ್ನು ಮಾರಾಟ ಮಾಡಿ ಅದರಿಂದ 1,05,00,000 ರೂಪಾಯಿ ಆದಾಯ ಗಳಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ನಕಲಿ ಮಾಸ್ಕ್ಗಳನ್ನೇ ನೈಜ ಮಾಸ್ಕ್ಗಳೆಂದು ನಂಬಿಸುವ ಸಲುವಾಗಿ ಎನ್-95 ಸೀಲ್ಗಳನ್ನು ಆರೋಪಿಗಳು ಬಳಸಿದ್ದಾರೆ. ಈ ರೀತಿ ಸಾರ್ವಜನಿಕರಿಗೆ ಮೋಸ ಮಾಡಿ ವ್ಯಾಪಾರ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.