ನೌಕರಿಗಾಗಿ ನಕಲಿ ಅಂಕಪಟ್ಟಿ: ಇಬ್ಬರ ವಿರುದ್ಧ ದೂರು, ಜಲಮಂಡಳಿ ಹುದ್ದೆಗೆ ಆಯ್ಕೆಯಾಗಿದ್ದ ವ್ಯಕ್ತಿಗಳು

Bank Fraud 27 JAN 20
Published on

ಬೆಂಗಳೂರು: ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ನಕಲಿ ಅಂಕಪಟ್ಟಿ ಸಲ್ಲಿಸಿದ್ದ ಇಬ್ಬರ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಡಬ್ಲ್ಯುಎಸ್​ಎಸ್​ಬಿಯ ಆಡಳಿತಾಧಿಕಾರಿ ವಿದ್ಯಾಶ್ರೀ ಚಂದರಗಿ ನೀಡಿದ ದೂರಿನ ಅನ್ವಯ ವಿಜಯಪುರದ ಸಂಗಪ್ಪ ಚವ್ಹಾಣ್ ಹಾಗೂ ದಾವಣಗೆರೆಯ ಎನ್. ಮರಿಯಪ್ಪ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಲಮಂಡಳಿಯ ವಿವಿಧ ವೃಂದದಲ್ಲಿ ಖಾಲಿಯಿದ್ದ ಬಿ ಮತ್ತು ಸಿ ದರ್ಜೆಯ 26 ಹುದ್ದೆಗಳಿಗೆ 2019ರ ಫೆ.29ರಂದು ಬ್ಯಾಕ್​ಲಾಗ್ ನೇಮಾಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಲಾಗಿತ್ತು. 2019ರ ಅ.11ರಂದು ಮೀಸಲಾತಿ ಅನುಗುಣವಾಗಿ ಹುದ್ದೆಯ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗಿತ್ತು.

ಸಹಾಯಕ ಹುದ್ದೆಗೆ ಆಯ್ಕೆಯಾಗಿದ್ದ ಸಂಗಪ್ಪ ಚವ್ಹಾಣ್ ಎಂಬಾತ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಂಕಪಟ್ಟಿಗಳನ್ನು ಸಲ್ಲಿಸಿದ್ದ. ಮೀಟರ್ ರೀಡರ್ ಹುದ್ದೆಗೆ ಆಯ್ಕೆಯಾಗಿದ್ದ ಎನ್. ಮರಿಯಪ್ಪ ‘ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್’ ಅಂಕಪಟ್ಟಿಗಳನ್ನು ಸಲ್ಲಿಸಿದ್ದ. ಅವರ ಅಂಕಪಟ್ಟಿ ಮತ್ತು ದಾಖಲಾತಿಗಳ ಪರಿಶೀಲನೆಗಾಗಿ ವಿಶ್ವವಿದ್ಯಾಲಯ ಹಾಗೂ ಶೈಕ್ಷಣಿಕ ಮಂಡಳಿಗೆ ರವಾನಿಸಲಾಗಿತ್ತು. ಪರಿಶೀಲನೆ ವೇಳೆ ಅಂಕಪಟ್ಟಿ ನಕಲಿ ಎಂಬುದು ಗೊತ್ತಾದ ಹಿನ್ನೆಲೆ ದೂರು ಕೊಟ್ಟಿದ್ದಾರೆ. ಈ ಕುರಿತು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net