

ಬೆಂಗಳೂರು: ಬಾಲಿವುಡ್ನ ಹೆಸರಾಂತ ನಿರ್ದೇಶಕ ರಾಜ್ಕುಮಾರ್ ಹಿರಾನಿ ನಿರ್ದೇಶನದ ಹಾಗೂ ನಟ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ 'ಡಂಕಿ' ಸಿನಿಮಾ ಡಿ.21 ರಂದು ದೇಶವ್ಯಾಪಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರಪ್ರೇಮಿಗಳಿಂದ ಪಾಸಿಟಿವ್ ರೆಸ್ಪಾನ್ಸ್ ಪಡೆದರು ಕೂಡ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಚಿತ್ರ ಮಂದಗತಿಯಲ್ಲಿ ಸಾಗುತ್ತಿದೆ!
ಬಾಲಿವುಡ್ನ ಕಿಂಗ್ ಖಾನ್ ನಟ ಶಾರುಖ್ ಖಾನ್, ನಟಿ ತಾಪ್ಸಿ ಪನ್ನು ಮುಖ್ಯಭೂಮಿಕೆಯಲ್ಲಿರುವ 'ಡಂಕಿ', ಬಿಡುಗಡೆಗೊಂಡು ಇಂದಿಗೆ ಎರಡು ದಿನಗಳು ಕಳೆದಿವೆ. ಬಾಕ್ಸ್ ಆಫೀಸ್‌ನಲ್ಲಿ ಮಿಂಚಿನ ಓಟ ಕಾಣದೇ ಇರುವುದು ಸದ್ಯ ಶಾರುಖ್ ಅಭಿಮಾನಿಗಳಲ್ಲಿ ಕೊಂಚ ಬೇಸರ ಮೂಡಿಸಿದೆ. ಇದೀಗ ವ್ಯಾಪಾರದ ಅಂದಾಜಿನ ಪ್ರಕಾರ, ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ 30 ಕೋಟಿ ರೂ. ಗಳಿಸಿದ್ದು, ಎರಡನೇ ದಿನಕ್ಕೆ ಸುಮಾರು 60 ಕೋಟಿ ರೂ. ಕಲೆಕ್ಷನ್ ಕಂಡಿದೆ.
'ಡಂಕಿ' ತೆರೆಗೆ ಬರುವ ಮುನ್ನವೇ ಸಿನಿಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಭಾರಿ ಕುತೂಹಲ ಕೆರಳಿಸಿತ್ತು. ರಾಜ್ಕುಮಾರ್ ಹಿರಾನಿ ಚಿತ್ರ ಎಂದರೆ ಅಲ್ಲೊಂದು ಬಲವಾದ ಕಥೆ, ಒಂದೊಳ್ಳೆ ಸಂದೇಶ ಜತೆಗೆ ಮಾಹಿತಿ ಇರುತ್ತದೆ ಎಂಬುದು ಪ್ರೇಕ್ಷಕರ ನಂಬಿಕೆ. ಅದೇ ರೀತಿ ಚಿತ್ರಮಂದಿರಕ್ಕೆ ಬಂದ ಚಿತ್ರಪ್ರೇಮಿಗಳು, ಸಿನಿಮಾದ ಕತೆಯನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ.
'ಡಂಕಿ' ಪಂಜಾಬ್‌ನಿಂದ ಇಂಗ್ಲೆಂಡ್‌ಗೆ ಹೋಗುವ ಕನಸು ಕಾಣುವ ನಾಲ್ಕು ಸ್ನೇಹಿತರ ಸುತ್ತ ಕಥೆ ಸುತ್ತುತ್ತದೆ. ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಸಲುವಾಗಿ ತೆಗೆದುಕೊಳ್ಳುವ ಒಂದು ನಿರ್ಧಾರ ಅವರ ಜೀವನದಲ್ಲಿ ಏನೆಲ್ಲಾ ಪರಿಸ್ಥಿತಿಗಳನ್ನು ತಂದೊಡ್ಡುತ್ತದೆ? ಯಾವ ಹಂತಗಳನ್ನು ದಾಟಿ ಹೋಗುವಂತೆ ಮಾಡುತ್ತದೆ ಎಂಬುದೇ ಕಥಾಹಂದರ. ಒಂದು ಸೂಕ್ಷ್ಮ ವಿಚಾರವನ್ನು ಪ್ರೇಕ್ಷಕರಿಗೆ ತಿಳಿಸುವ ಡಂಕಿ ಪದದ ಅರ್ಥ ಇಷ್ಟೇ, ಉತ್ತಮ ಜೀವನ ಕಟ್ಟಿಕೊಳ್ಳುವ ಆಸೆಯಿಂದ ಅಕ್ರಮವಾಗಿ ಅನ್ಯ ದೇಶಗಳಿಗೆ ವಲಸೆ ಹೋಗುವುದನ್ನೇ ಡಂಕಿ ಎಂದು ಕರೆಯಲಾಗುತ್ತದೆ.
ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಜಿಯೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಸದ್ಯ ಎರಡನೇ ದಿನ ಬಾಕ್ಸ್ ಆಫೀಸ್‌ನಲ್ಲಿ ಮಂದಗತಿಯಲ್ಲಿ ಸಾಗಿದೆ. ಚಿತ್ರವು ಮುಂದಿನ ದಿನಗಳಲ್ಲಿ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ, (ಏಜೆನ್ಸೀಸ್).