146 ಜನ ಸಂಸದರನ್ನು ಅಮಾನತು ಖಂಡಿಸಿ ಜಿಲ್ಲಾ ಕಾಂಗ್ರೆಸ್ನಿಂದ ಪ್ರತಿಭಟನೆ

146 ಜನ ಸಂಸದರನ್ನು ಅಮಾನತು ಖಂಡಿಸಿ ಜಿಲ್ಲಾ ಕಾಂಗ್ರೆಸ್ನಿಂದ ಪ್ರತಿಭಟನೆ
Published on

ಹಾಸನ: ಸಂಸತ್ ಭವನದ ಮೇಲೆ ದಾಳಿ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಶ್ನೆ ಮಾಡಿದ 146 ಜನ ಸಂಸದರನ್ನು ಅಮಾನತು ಮಾಡಿರುವ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಇ.ಹೆಚ್. ಲಕ್ಷ್ಮಣ್ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಸಂಸತ್ ಭವನಕ್ಕೆ ಕಿಡಿಗೇಡಿಗಳು ನುಗ್ಗಿ ಸಂಸತ್ ಭವನದ ಒಳಗಡೆ ಹಾಗೂ ಹೊರಗಡೆ ಹೊಗೆ ಬಾಂಬುಗಳನ್ನು ಸಿಡಿಸಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಸಂಸತ್ತಿನಲ್ಲಿ ಭದ್ರತಾ ವೈಫಲ್ಯದಿಂದ ಈ ದುರ್ಘಟನೆ ಸಂಭವಿಸಿದ್ದು, ಈ ಘಟನೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯ ವಿಪಕ್ಷಗಳ ಸಂಸದರು ಪ್ರಶ್ನಿಸಿ ಸೂಕ್ತ ವಿವರಣೆ ನೀಡುವಂತೆ ಆಗ್ರಹಿಸಿದ್ದರಿಂದ ಮತ್ತು ಭದ್ರತಾ ವೈಫಲ್ಯವನ್ನು ಕಟುವಾಗಿ ಟೀಕಿಸಿದ್ದರಿಂದ ಸಹಿಲಾರದ ಆಡಳಿತಾರೂಢ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ ನೀತಿ ಅನುಸರಿಸಿ ಲೋಕಸಭೆಯ 97 ಮತ್ತು ರಾಜ್ಯಸಭೆಯ 46 ಒಟ್ಟು 146 ಸಂಸದರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವುದು ಸಂವಿಧಾನ ವಿರೋಧಿ ಕೆಲಸ ಆಕ್ರೋಶ ವ್ಯಕ್ತಪಡಿಸಿದರು.
ಇದು ಕೇಂದ್ರ ಸರಕಾರದ ಜನವಿರೋಧಿ ಮತ್ತು ಸಂವಿಧಾನ ವಿರೋಧಿ ಕ್ರಮವಾಗಿದ್ದು, ದೇಶದ ಇತಿಹಾಸದಲ್ಲಿ ಇದೊಂದು ಕರಾಳ ದಿನವಾಗಿದೆ. ಯಾವತ್ತೂ ನಡೆದಿಲ್ಲ ಹಾಗೂ ಭವಿಷ್ಯದಲ್ಲಿ ನಡೆಯದಂತಹ ಘಟನೆ. ದೇಶದ 140 ಕೋಟಿ ಜನರಿಗೆ ಪ್ರಧಾನಿ ಉತ್ತರ ಕೊಡಬೇಕಿದೆ. ವಿಪಕ್ಷಗಳನ್ನು ದಮನ ಮಾಡುವ ಸರ್ವಾಧಿಕಾರಿ ಧೋರಣೆಯಾಗಿದೆ. ಕೇಂದ್ರ ಸರ್ಕಾರದ ಜನವಿರೋಧಿ ಮತ್ತು ಸಂವಿಧಾನ ವಿರೋಧಿ ಕ್ರಮವನ್ನು ಖಂಡಿಸಿ ಮನವಿ ಸಲ್ಲಿಸಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಬಾಗೂರು ಮಂಜೇಗೌಡ, ಬನವಾಸೆ ರಂಗಸ್ವಾಮಿ, ಎಚ್.ಕೆ. ಜವರೇಗೌಡ, ಪಟೇಲ್ ಶಿವಪ್ಪ, ಮಂಜುನಾಥ್ ಶರ್ಮ, ರಾಮಚಂದ್ರ, ಎಚ್.ಕೆ. ಪ್ರಕಾಶ್, ಶಂಕರರಾಜು, ರಘು ದಾಸರಕೊಪ್ಪಲು, ಹರೀಶ್, ವೆಂಕಟೇಗೌಡ, ಬೂದೇಶ್, ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net