

ಮುಂಬೈ: ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅಭಿನಯದ ‘ಡಂಕಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 11 ದಿನ ಕಳೆದಿದ್ದು, ಇದೀಗ ಬಾಕ್ಸ್ ಆಫೀಸ್ನಲ್ಲಿ ಒಟ್ಟು 380 ಕೋಟಿ ರೂ. ಗಳಿಕೆ ಕಂಡಿದೆ. ಡಿಸೆಂಬರ್ 21ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಕ್ಲಾಸ್ ಸಿನಿಮಾ ಆದ್ದರಿಂದ ಮಂದಗತಿಯಲ್ಲಿ ಕಲೆಕ್ಷನ್ ಮಾಡಿದೆ. ಕೇವಲ ಭಾರತದಲ್ಲಿಯೇ ಚಿತ್ರವು 150 ಕೋಟಿ ರೂ. ಬಾಚಿಕೊಂಡಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ.
ಶಾರುಖ್ ಅಭಿನಯದ ಈ ಹಿಂದಿನ ಸಿನಿಮಾಗಳಾದ 'ಪಠಾಣ್' ಹಾಗೂ 'ಜವಾನ್' ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿದ್ದವು. ಈ ಎರಡು ಚಿತ್ರಗಳು 1000 ಕೋಟಿ ಕ್ಲಬ್ ಸೇರಿದ್ದವು. ಅದರಂತೆ 'ಡಂಕಿ' ಕೂಡ ಸೇರಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ. ರಿಲೀಸ್ ಆದ ಮೊದಲ ದಿನವೇ 29 ಕೋಟಿ ಕಲೆಕ್ಷನ್ ಮಾಡಿದ್ದ ಚಿತ್ರ ಹಂತ ಹಂತವಾಗಿ ಉತ್ತಮ ಮೊತ್ತವನ್ನೇ ತನ್ನದಾಗಿಸಿಕೊಂಡಿದೆ.
ಚಿತ್ರದಲ್ಲಿ ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಂ ಕೊಚ್ಚರ್, ಅನಿಲ್ ಗ್ರೋವರ್ ಮುಂತಾದವರು ನಟಿಸಿದ್ದಾರೆ. ಕತೆಯ ಆಯ್ಕೆಯಲ್ಲಿ ಪ್ರತಿಬಾರಿ ನಿರ್ದೇಶಕ ರಾಜ್ಕುಮಾರ್ ಹಿರಾನಿ ಒಂದು ಗಟ್ಟಿಯಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಸಿನಿಪ್ರೇಮಿಗಳಿಗೆ ಗೊತ್ತಿರುವ ಸಂಗತಿ. ಅದೇ ರೀತಿ ಈ ಚಿತ್ರದಲ್ಲಿ ಕೆಲಸ ಅರಸಿ ಅಕ್ರಮವಾಗಿ ದೇಶಗಳ ಗಡಿ ದಾಟುವವರ ಕಥೆಯನ್ನು ಡಂಕಿ ಮೂಲಕ ತೋರಿಸಿದ್ದಾರೆ.
'ಡಂಕಿ' ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಮತ್ತು ರಾಜ್ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್ಕುಮಾರ್ ಹಿರಾನಿ ನಿರ್ಮಿಸಿದ್ದಾರೆ.