

ನಂಜನಗೂಡು: ಕನ್ನಡ ಬಾಷೆಗೆ ಎರಡು ಸಾವಿರ ವರ್ಷಗಳ ಸಮೃದ್ಧ ಇತಿಹಾಸವಿದೆ. ಮಾತೃ ಭಾಷೆ ನಮ್ಮ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಕಲಿಸಿಕೊಡುವ ಜತೆಗೆ ವ್ಯಕ್ತಿತ್ವ ರೂಪಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ವೈ.ಎಸ್.ಸಿದ್ದೇಗೌಡ ಹೇಳಿದರು.
ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲೆಂಟ್ ಫಾರ್ಮೋವ ಕಂಪನಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆಯನ್ನಾಡುವ ಜನರು ಸೋಹದರ ಭಾಷೆಯ ಜನರೊಂದಿಗೆ ಸಹಬಾಳ್ವೆ ನಡೆಸುವ ಮೂಲಕ ಉದಾರಿಗಳು ಎಂದು ಹೆಸರಾಗಿದ್ದಾರೆ. ಹೊರ ರಾಜ್ಯದಿಂದ ಬಂದು ಜೀವನ ರೂಪಿಸಿಕೊಳ್ಳುವ ಜನರು ಈ ನೆಲದ ಭಾಷೆ ಕನ್ನಡ ಕಲಿತು ಇಲ್ಲಿನ ಜನರೊಂದಿಗೆ ಒಂದಾಗಬೇಕು. ಕನ್ನಡ ಭಾಷೆ ಶಿಕ್ಷಣ, ಆಡಳಿತ ಹಾಗೂ ನ್ಯಾಯಾಲಯದಲ್ಲಿ ಪ್ರಾಮುಖ್ಯತೆ ಪಡೆಯಬೇಕು. ನಮ್ಮ ಇಚ್ಛಾಶಕ್ತಿ ಕೊರತೆಯಿಂದ ಭಾಷಾ ಪ್ರೇಮ ಕಡಿಮೆಯಾಗುತ್ತಿದೆ. ಕನ್ನಡದ ಉಳಿವಿನೊಂದಿಗೆ ಮಾತ್ರ ನಮ್ಮ ಅಸ್ತಿತ್ವ ಉಳಿಯಲಿದೆ. ಅಕಸ್ಮಾತ್ ಕನ್ನಡ ಅಳಿದರೆ ನಾವು ಅನ್ಯ ಭಾಷೆಯ ಗುಲಾಮಗಿರಿ ಮಾಡಬೇಕಾಗುತ್ತದೆ ಎಂದು ಹೇಳಿದರು.
ಸುತ್ತೂರು ಜೆಎಸ್‌ಎಸ್ ಶಾಲೆಯ ಮುಖ್ಯ ಶಿಕ್ಷಕ ಮ.ಗು.ಬಸವಣ್ಣ ಮಾತನಾಡಿ, ಕುವೆಂಪು, ಬೇಂದ್ರೆ ಅವರಂತಹ ಮಹಾಕವಿಗಳ ಬೀಡಾದ ಕರ್ನಾಟಕ ಸ್ವಾಭಿಮಾನಿಗಳ ತವರೂರು. ಕಲೆ, ಸಂಸ್ಕೃತಿ, ಸಾಹಿತ್ಯಗಳಿಂದ ಶ್ರೀಮಂತವಾಗಿರುವ ಕನ್ನಡ ನಾಡು ಹಾಗೂ ನುಡಿ ನಮ್ಮೆಯ ಹೆಮ್ಮೆಯಾಗಬೇಕು. ಕನ್ನಡ ರಾಜ್ಯೋತ್ಸವ ನವೆಂಬರ್ ಮಾಸದ ಹಬ್ಬವಾಗದೆ ಕವಿ ನಿಸಾರ್ ಅಹಮ್ಮದ್ ಹೇಳಿದಂತೆ ಕನ್ನಡ ರಾಜ್ಯೋತ್ಸವ ನಿತೋತ್ಸವವಾಗಬೇಕು ಎಂದರು.
ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಹಾಗೂ ಸರ್ಕಾರಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಖಾನೆ ಮುಖ್ಯಸ್ಥ ಸುಂದರ್ ಗಣೇಶ್, ಜುಬಿಲೆಂಟ್ ಕಾರ್ಮಿಕ ಸಂಘದ ಅಧ್ಯಕ್ಷ ಕೆ.ಬಸವರಾಜ್, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸುಬ್ರಹ್ಮಣ್ಯ, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.