ಪತ್ನಿಯ ಬಿಕಿನಿ ಆಸೆಗಾಗಿ ಖಾಸಗಿ ದ್ವೀಪವನ್ನೇ ಖರೀದಿಸಿದ ಗಂಡ! ಬೆಲೆ ಕೇಳಿದ್ರೆ ಬೆರಗಾಗೋದು ಖಚಿತ

Dubai millionaire
Published on

ದುಬೈ: ಮದುವೆಯಾದ ಕೆಲವೇ ವರ್ಷಗಳಲ್ಲಿ ಪತಿ-ಪತ್ನಿಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಬಹುತೇಕ ದಂಪತಿ ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ, ವಿವಾಹೇತರ ಸಂಬಂಧಗಳು ಹಾಗೂ ಭಿನ್ನಾಭಿಪ್ರಾಯಗಳು ಸೇರಿದಂತೆ ಅನೇಕ ಕಾರಣಗಳಿಂದ ಬೇರೆಯಾಗುತ್ತಿದ್ದಾರೆ. ಆದರೆ, ಕೆಲವು ದಂಪತಿ ಜೀವನದಲ್ಲಿ ತುಂಬಾ ಸಾಮರಸ್ಯದಿಂದ ಬದುಕುತ್ತಾರೆ. ಒಬ್ಬರಿಗೊಬ್ಬರು ಪ್ರಾಣ ಕೊಡಲು ಕೂಡ ಸಿದ್ಧರಿರುತ್ತಾರೆ. ಹೆಂಡತಿಯ ಸುಖಕ್ಕಾಗಿ ಗಂಡ ಏನು ಬೇಕಾದರು ಮಾಡಲು ತಯಾರಾಗಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಪತಿರಾಯ ತನ್ನ ಪತ್ನಿಗಾಗಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ದ್ವೀಪವನ್ನೇ ಖರೀದಿಸಿದ್ದಾನೆ. ಇದರ ಹಿಂದಿನ ಕಾರಣ ಏನೆಂದು ತಿಳಿದರೆ ನಿಮ್ಮ ಹುಬ್ಬೇರುವುದು ಖಚಿತ.

ಸಾಮಾನ್ಯವಾಗಿ ಗಂಡಂದಿರು ತಮ್ಮ ಹೆಂಡತಿಯರನ್ನು ಸಂತೋಷಪಡಿಸಲು ಸಣ್ಣ ಉಡುಗೊರೆಗಳನ್ನು ನೀಡುತ್ತಾರೆ. ಆದರೆ, ಈ ಮಿಲಿಯನೇರ್ ಗಂಡ ತನ್ನ ಹೆಂಡತಿಯ ಸಂತೋಷಕ್ಕಾಗಿ ದ್ವೀಪವನ್ನೇ ಖರೀದಿಸಿದ್ದಾನೆ. ಅದೂ ಕೂಡ ಬಿಕಿನಿ ಧರಿಸಿ ತನ್ನ ಹೆಂಡತಿ ಮುಜುಗರಕ್ಕೀಡಾಗಬಾರದು ಎಂಬ ಉದ್ದೇಶದಿಂದ.

ದುಬೈ ಮೂಲದ ಖ್ಯಾತ ಉದ್ಯಮಿ ಜಮಾಲ್ ಅಲ್ ನಡಾಕ್​ ಅವರು ತಮ್ಮ ಪತ್ನಿ ಸೌದಿ ಅಲ್ ನಡಾಕ್​​ಗಾಗಿ ಹಿಂದೂ ಮಹಾಸಾಗರದಲ್ಲಿ ದ್ವೀಪವನ್ನು ಖರೀದಿಸಿದ್ದಾರೆ. ಅದಕ್ಕಾಗಿ ಅವರು 50 ಮಿಲಿಯನ್ ಡಾಲರ್ (ಭಾರತೀಯ ಕರೆನ್ಸಿ ಪ್ರಕಾರ 418 ಕೋಟಿ ರೂ.) ಪಾವತಿಸಿದ್ದಾರೆ. ಈ ವಿಚಾರವನ್ನು ಜಮಾಲ್ ಅಲ್ ನಡಾಕ್ ಪತ್ನಿ ಸೌದಿ ಅಲ್ ನಡಾಕ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಇದಲ್ಲದೆ, ಆ ದ್ವೀಪದ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.

ಬಿಕಿನಿ ಧರಿಸಿ ಹೊರಗೆ ಓಡಾಡಲು ನನಗೆ ಕಷ್ಟವಾದ ಕಾರಣ ನನ್ನ ಪತಿ ದ್ವೀಪವನ್ನು ಖರೀದಿಸಿದ್ದಾರೆ ಎಂದು ಸೌದಿ ಅಲ್ ನಡಾಕ್ ಹೇಳಿದ್ದಾರೆ. ನಾವಿಬ್ಬರೂ ದೀರ್ಘಾವಧಿಯ ಹೂಡಿಕೆಯ ಬಗ್ಗೆ ಯೋಚಿಸಿದ್ದೆವು. ಆ ಸಮಯದಲ್ಲಿ ನಾವು ನಮ್ಮ ಖಾಸಗಿತನದತ್ತಲೂ ಗಮನ ಹರಿಸಿದ್ದೆವು. ನಾನು ಸಮುದ್ರತೀರದಲ್ಲಿ ಸುರಕ್ಷಿತವಾಗಿ ವಿಶ್ರಾಂತಿ ಪಡೆಯಬಹುದು ಎಂಬ ಕಾರಣಕ್ಕೆ ದ್ವೀಪವನ್ನು ಖರೀದಿಸುವ ಆಲೋಚನೆ ಹುಟ್ಟಿಕೊಂಡಿತು. ಇದೇ ನಮ್ಮ ಅತ್ಯುತ್ತಮ ಹೂಡಿಕೆಯಾಗಿದೆ. ಈ ದ್ವೀಪವು ಏಷ್ಯಾ ಖಂಡದಲ್ಲಿದೆ. ಖಾಸಗಿತನ ಕಾರಣಕ್ಕೆ ಲೋಕೇಶನ್​ ಅನ್ನು ಹೇಳಲಾಗದು ಎಂದು ಸೌದಿ ಅಲ್​ ನಡಾಕ್​ ಹೇಳಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕೇವಲ ಒಂದೇ ವಾರದಲ್ಲಿ 2.4 ಮಿಲಿಯನ್​ಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಬಿಕಿನಿ ಧರಿಸಲು ದ್ವೀಪವನ್ನೇ ಖರೀದಿಸಿರುವ ಸುದ್ದಿ ಕೇಳಿ ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net