ಅನ್ಯಧರ್ಮದ ತರುಣಿಯೊಂದಿಗೆ ಸಂಬಂಧ: ತೀವ್ರ ಥಳಿತಕ್ಕೊಳಗಾಗಿ ವಿದ್ಯಾರ್ಥಿ ಸಾವು, ಅಪ್ರಾಪ್ತರ ಬಂಧನ

Youth
Published on

ನವದೆಹಲಿ: ಅನ್ಯಧರ್ಮದ ಹುಡುಗಿಯೊಂದಿಗಿನ ಪರಿಚಯ 18 ವರ್ಷದ ಪ್ರಾಯದ ಹುಡುಗನ ಸಾವಿಗೆ ಕಾರಣವಾಗಿದೆ. ಹುಡುಗಿಯ ಮನೆಯವರು ಹುಡುಗನನ್ನು ಥಳಿಸಿ, ಹತ್ಯೆ ಮಾಡಿರುವ ಘಟನೆ ದೆಹಲಿಯ ಆದರ್ಶ ನಗರದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಹುಲ್​ (18) ಮೃತ ಹುಡುಗ. ಈತ ಪಶ್ಚಿಮ ದೆಹಲಿಯ ಆದರ್ಶ ನಗರ ನಿವಾಸಿ. ರಾಹುಲ್​ ಮೇಲೆ ದಾಳಿ ಮಾಡುವ ಮುನ್ನ ಆತ​ ಹುಡುಗಿಯೊಂದಿಗೆ ಮಾತನಾಡುತ್ತ ನಿಂತಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೇರೆ ಬೇರೆ ಧರ್ಮದವರಾಗಿದ್ದರಿಂದ ರಾಹುಲ್​ನೊಂದಿಗಿನ ಸ್ನೇಹ ಹುಡುಗಿ ಕುಟುಂಬಕ್ಕೆ ಇಷ್ಟವಿರಲಿಲ್ಲ. ಇದೇ ವಿಚಾರವಾಗಿ ಹುಡುಗಿಯ ಸಹೋದರ ಮತ್ತು ಕುಟುಂಬದ ಇನ್ನಿತರರು ಸೇರಿ ರಾಹುಲ್​ನನ್ನು ಚೆನ್ನಾಗಿ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆಂದು ತನಿಖಾ ವೇಳೆ ಹಿರಿಯ ಪೊಲೀಸ್​ ಅಧಿಕಾರಿ ವಿಜಯಂತಾ ಆರ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಕ್ಟೋಬರ್​ 7ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಂದು ರಾತ್ರಿ ಟ್ಯೂಷನ್​ ಮುಗಿಸಿ ಮನೆ ಹೊರಡಬೇಕಾದರೆ ಹುಡುಗಿ ಮನೆಯವರು ರಾಹುಲ್​ನನ್ನು ಸುತ್ತುವರಿದು ಚೆನ್ನಾಗಿ ಥಳಿಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಗಂಭೀರ ಆಂತರಿಕ ಗಾಯಗಳಿಂದ ರಾಹುಲ್​ ಮೃತಪಟ್ಟಿರುವುದು ಶವಪರೀಕ್ಷೆಯಲ್ಲಿ ದೃಢವಾಗಿದೆ.

ರಾಹುಲ್​ ಮನೆಯಲ್ಲೂ ಸಹ ಕೆಲವರಿಗೆ ಪಾಠ ಬೋಧನೆ ಮಾಡುತ್ತಿದ್ದ. ದೆಹಲಿ ಯೂನಿವರ್ಸಿಟಿಯಲ್ಲಿ ಬ್ಯಾಚುಲರ್​ ಆಫ್​ ಆರ್ಟ್ಸ್​ನ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದ. ರಾಹುಲ್​ ಮೇಲೆ 8 ರಿಂದ 10 ಮಂದಿ ಹಲ್ಲೆ ಮಾಡಿದ್ದಾರೆಂದು ತಿಳಿದುಬಂದಿದೆ. ನಮಗೆ ಏನು ಬೇಡ, ನ್ಯಾಯ ಸಿಕ್ಕರೆ ಸಾಕು ಎಂದು ರಾಹುಲ್​ ತಂದೆ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net