

ಶಿವಮೊಗ್ಗ: ಜಿಲ್ಲೆಯಲ್ಲಿ 2014ರಿಂದ ಇದುವರೆಗೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಮೂಲಕ ನಡೆದಿರುವ ಕಾಮಗಾರಿಗಳಲ್ಲಿ ಹಲವು ಕಳಪೆಯಾಗಿವೆ. ಇನ್ನು ಕೆಲವಕ್ಕೆ ನಿಯಮಾವಳಿ ಮೀರಿ ಅನುದಾನ ಒದಗಿಸಲಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಡಿಎಸ್‌ಎಸ್(ಅಂಬೇಡ್ಕರ್ ವಾದ) ಮುಖಂಡರು ಸೋಮವಾರದಿಂದ ಡಿಸಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಕೋಟ್ಯಂತರ ರೂ. ಹಣ ಬಿಡುಗಡೆ ಮಾಡಿದೆ. ಆದರೆ ಈ ಹಣ ಸಮರ್ಪಕವಾಗಿ ಪರಿಶಿಷ್ಟರನ್ನು ತಲುಪಿಲ್ಲ. ಕೆಲವೆಡೆ ಆ ಹಣವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಬೀದಿ ದೀಪಗಳ ಅಳವಡಿಕೆ ಸರಿಯಾಗಿಲ್ಲ. ಅಂಬೇಡ್ಕರ್ ಭವನ ನಿರ್ಮಾಣಕ್ಕೆಂದು ಮಂಜೂರಾದ ಭೂಮಿಯನ್ನು ಮಾರಾಟ ಮಾಡಲಾಗಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗಳು ಕಳಪೆಯಾಗಿವೆ. ಪರಿಶಿಷ್ಟರ ಕಾಲನಿಯಲ್ಲಿ ನಡೆಸಬೇಕಿದ್ದ ಕಾಮಗಾರಿಯನ್ನು ಮೇಲ್ವರ್ಗದವರು ವಾಸಿಸುವ ಪ್ರದೇಶಗಳಲ್ಲಿ ನಡೆಸಿದ್ದಾರೆ ಎಂದು ದೂರಿದರು.
ನೀರಾವರಿ ನಿಗಮದ ಹಣವನ್ನು ಖಾಸಗಿ ಬಡಾವಣೆಯ ಚರಂಡಿ ನಿರ್ಮಾಣಕ್ಕೆ ಬಳಸಿದ್ದಾರೆ. ನಗರದ ಅಂಬೇಡ್ಕರ್ ಭವನ ದುರಸ್ತಿಯಾಗಬೇಕಿದೆ. ಡಾ. ಬಾಬು ಜಗಜೀವನರಾಮ್ ಭವನದ ಕಾಮಗಾರಿ ಪೂರ್ಣಗೊಂಡಿಲ್ಲ. ವಾರ್ಡ್ ನಂ 6ರ ಅಂಬೇಡ್ಕರ್ ನಗರದ ಪಕ್ಕದಲ್ಲಿರುವ ಹಳೆಯ ಗೌಳಿಹಟ್ಟಿ ಗ್ರಾಮ ಠಾಣಾ ಜಾಗವನ್ನು ಅಕ್ರಮ ದಾಖಲೆ ಸೃಷ್ಟಿಸಿ ಭೂಗಳ್ಳರು ಖಾತೆ ಮಾಡಿಸಿಕೊಂಡು ಮಾರಾಟ ಮಾಡಿದ್ದಾರೆ. ಈ ಖಾತೆಗಳನ್ನು ವಜಾಗೊಳಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್. ಹಾಲೇಶಪ್ಪ, ಪ್ರಮುಖರಾದ ಶಿವಕುಮಾರ್, ಆನಂದ್ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.