

ಶಿವಮೊಗ್ಗ: ಹಲವು ವರ್ಷಗಳ ಕಾಲ ಭದ್ರಾವತಿ ತಾಲೂಕು ಕಾಚಗೊಂಡನಹಳ್ಳಿ ಸರ್ವೇ ನಂ.15ರಲ್ಲಿ ಭೋವಿ ಸಮುದಾಯದ ಸ್ವಾಧೀನದಲ್ಲಿದ್ದ ಭೂಮಿಯನ್ನು ಅದೇ ಸಮುದಾಯಕ್ಕೆ ಮರಳಿ ನೀಡಬೇಕೆಂದು ಒತ್ತಾಯಿಸಿ ಡಿಎಸ್‌ಎಸ್ ನೇತೃತ್ವದಲ್ಲಿ ಭೂವಂಚಿತರು ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕಾಚಗೊಂಡನಹಳ್ಳಿಯ 49 ಕುಟುಂಬಗಳಿಗೆ ತಲಾ ಎರಡು ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿತ್ತು. ಹಲವು ವರ್ಷ ಆ ಭೂಮಿ ಫಲಾನುಭವಿಗಳ ಒಡೆತನದಲ್ಲೇ ಇತ್ತು. ಅವರಿಗೆ ಪಹಣಿ ಹಾಗೂ ಮಂಜೂರಾತಿ ಪತ್ರವೂ ಸಿಕ್ಕಿತ್ತು. ಆದರೆ ಈಗ ಕೆಲವು ಪ್ರಭಾವಿಗಳು ನೈಜ ವಾರಾಸುದಾರರನ್ನು ಅಲ್ಲಿಂದ ಒಕ್ಕಲೆಬ್ಬಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಸರ್ವೆ ನಂ.15ರಲ್ಲಿ ಒಟ್ಟು 528.27 ಗುಂಟೆ ಜಮೀನಿದೆ. ಭದ್ರಾವತಿ ಭೋವಿ ಕಾಲನಿಯಲ್ಲಿ ವಾಸವಾಗಿದ್ದ 49 ಕುಟುಂಬಗಳಿಗೆ ಒಟ್ಟು 98 ಎಕರೆ ಭೂಮಿ ಮಂಜೂರು ಮಾಡಲಾಗಿತ್ತು. ದೌರ್ಜನ್ಯದಿಂದ ಈ ಭೂಮಿಯಲ್ಲಿ ಭೋವಿ ಸಮಾಜದವರಿಂದ ಪಡೆದುಕೊಂಡವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಜಮೀನನ್ನು ಮೂಲ ವಾರಾಸುದಾರರಿಗೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ಮುಖಂಡರಾದ ಶಿವಬಸಪ್ಪ, ಚಂದ್ರಪ್ಪ ಜೋಗಿ, ಬೊಮ್ಮನಕಟ್ಟೆ ಕೃಷ್ಣಪ್ಪ, ಹರಿಗೆ ರವಿ, ತಮ್ಮಯ್ಯ, ರಮೇಶ್ ಚಿಕ್ಕಮರಡಿ ಮುಂತಾದವರಿದ್ದರು.