

ಶಿವಮೊಗ್ಗ: ದಲಿತ ಸಂಘರ್ಷ ಸಮಿತಿ ಸುವರ್ಣ ಮಹೋತ್ಸವದ ಅಂಗವಾಗಿ ಜೂ.26ರ ಬೆಳಗ್ಗೆ 11.30ಕ್ಕೆ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಅವರ 134ನೇ ಜನ್ಮದಿನ, ದಲಿತಪರ ಹೋರಾಟಗಾರ ಪ್ರೊ. ಬಿ.ಕೃಷ್ಣಪ್ಪ ಅವರ 87ನೇ ಜನ್ಮದಿನ ಹಾಗೂ ಸಂವಿಧಾನ ಸಂರಕ್ಷಣಾ ಸಂಕಲ್ಪ ಸಮಾವೇಶ ಆಯೋಜಿಸಲಾಗಿದೆ ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ ತಿಳಿಸಿದರು.
ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಕೃಷ್ಣಪ್ಪ ಸಮಾವೇಶ ಉದ್ಘಾಟಿಸುವರು. ಡಿಸಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ, ನಿವೃತ್ತ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರಯ್ಯ ಭಾಗವಹಿಸುವರು. ಚಿತ್ರದುರ್ಗದ ದಲಿತ ಲೇಖಕ ಸಿ.ಕೆ.ಮಹೇಶ್ ಮುಖ್ಯ ಭಾಷಣ ಮಾಡುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡಿಎಸ್‌ಎಸ್ ದಮನಿತರ, ಶೋಷಿತರ ಪರವಾಗಿ ಕೆಲಸ ಮಾಡುತ್ತಿದೆ. ಪ್ರೊ. ಬಿ.ಕೃಷ್ಣಪ್ಪ 1974-75ರಲ್ಲಿ ಜಾತಿರಹಿತ ಸಮಾಜ ರಚನೆಯ ಉದ್ದೇಶದಿಂದ ಈ ಸಂಘಟನೆ ಆರಂಭಿಸಿದ್ದರು. ಅಂಬೇಡ್ಕರ್ ಸಾರ್ವಜನಿಕ ಸಮಾನತೆ ಸಾರುವ ಸಂವಿಧಾನ ನೀಡಿದ್ದಾರೆ. ಹೀಗಾಗಿ ಈ ಇಬ್ಬರು ಮಹನೀಯರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಕೆ.ಎ.ರಾಜ್‌ಕುಮಾರ್, ಪ್ರಮುಖರಾದ ಪ್ರಕಾಶ್ ಲಿಗಾಡಿ, ಏಳುಮಲೈ, ನರಸಿಂಹಮೂರ್ತಿ, ಬಸವರಾಜ್ ಬೂದಿಗೆರೆ, ಆರ್.ಸಂದೀಪ್, ಮಹಾಲಿಂಗಪ್ಪ, ಗಿರೀಶ್, ಸುರೇಶ್ ಇತರರಿದ್ದರು.