ಟ್ರಿಪ್​​​​​​ಗೆ ಹೋದ ಹೆಂಡತಿ ಮನೆಗೆ ಬಂದಿಲ್ಲ, ಫ್ರೀ ಬಸ್ ಪ್ರಯಾಣ ರದ್ದುಗೊಳಿಸಿ ಎಂದ ಕುಡುಕ ಪತಿರಾಯ

drink
Published on

ಬೆಂಗಳೂರು: ರಾಜ್ಯದ ಶಕ್ತಿ ಯೋಜನೆ ಕುರಿತು ಮಿಶ್ರ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ಕೆಲವರು ಯೋಜನೆಯ ಬಗ್ಗೆ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದರೆ, ಮತ್ತೆ ಕೆಲವರಿಂದ ನಾನಾ ಆರೋಪಗಳು ಕೇಳಿಬರುತ್ತಿವೆ. ಒಂದೆಡೆ ಶಕ್ತಿಯೋಜನೆ ಬಡ ಅಜ್ಜಿಗೆ ಮೊಮ್ಮಕ್ಕಳನ್ನು ನೋಡಿಸುವ ಅವಕಾಶ ಕಲ್ಪಿಸಿಕೊಟ್ಟಿರುವ ಸುದ್ದಿ ವರದಿಯಾಗಿದೆ. ಹಾಗೆಯೇ ದಿನನಿತ್ಯ ಕಚೇರಿಗೆ ಓಡಾಡುವ ಉದ್ಯೋಗಸ್ಥರಿಗೆ ಇದರಿಂದ ಬಹಳ ಅನುಕೂಲವಾಗಿರುವುದಂತೂ ಸುಳ್ಳಲ್ಲ. ಇದೆಲ್ಲದರ ಮಧ್ಯೆ ಆಟೋ, ಟ್ಯಾಕ್ಸಿ ಚಾಲಕರ ಆದಾಯ ಇಳಿಕೆಯಾಗಿದೆ ಎನ್ನಲಾಗಿದೆ. ಆದರೆ ಟ್ರಿಪ್​​ಗೆ ಹೋದ ಹೆಂಡತಿ ಮನೆಗೆ ಬಂದಿಲ್ಲ ಎಂದು ಕುಡುಕ ಗಂಡ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಟೈರ್​​ಗೆ ತಲೆಕೊಟ್ಟ ವಿಚಿತ್ರ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಹೊಸಕೋಟೆ ನಗರ ಸಮೀಪ ನಡೆದಿದೆ.

ಏನಿದು ಘಟನೆ?

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದರಿಂದ ಟ್ರಿಪ್​​​ಗೆಂದು ಹೋದ ಹೆಂಡತಿ ಮನೆಗೆ ಬಂದಿಲ್ಲವೆಂದು ಹೊಸಕೋಟೆ ನಗರದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಟೈರ್​​​​ಗೆ ತಲೆ ಕೊಡಲು ವ್ಯಕ್ತಿಯೋರ್ವರು ಮುಂದಾಗಿದ್ದಾರೆ. ಬುಧವಾರ (ಜೂ.28) ಸಂಜೆ ಟೈರ್​​​​ಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು, ಹೊಸಕೋಟೆ ಬಸ್ ನಿಲ್ದಾಣದಲ್ಲಿ ಅರ್ಧಗಂಟೆ ಬಸ್ ಸಂಚಾರ ಸ್ಥಗಿತವಾಗಿದೆ.

ವ್ಯಕ್ತಿಯು ಕುಡಿದು ತೂರಾಡಿ ವಾಹನ‌‌ ಸಂಚಾರಕ್ಕೆ ಅಡ್ಡಿ ಮಾಡಿದ್ದರಿಂದ ಬಸ್​​​​ನಲ್ಲಿ‌ ಕುಳಿತ ಪ್ರಯಾಣಿಕರು ಪರದಾಟವಾಡುವ ಪರಿಸ್ಥಿತಿ ಬಂದೊದಗಿದೆ. "ನನ್ನ ಹೆಂಡತಿ ಟ್ರಿಪ್​​​​ಗೆ ಹೋದವಳು‌ ಇನ್ನೂ ವಾಪಸ್ ಬಂದಿಲ್ಲ, ಸಿದ್ದರಾಮಯ್ಯ ಸರಿಯಿಲ್ಲ, ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ರದ್ದುಗೊಳಿಸಿ' ಎಂದು ಮದ್ಯ ಸೇವಿಸಿದ ವ್ಯಕ್ತಿ ಆಗ್ರಹಿಸಿದ್ದಾನೆ.

ಟೈರ್​​​​​ಗೆ ತಲೆ ಕೊಡಲು ಯತ್ನಿಸಿದ ಕುಡುಕನನ್ನು ಜನರು ರಕ್ಷಣೆ ಮಾಡಿದ್ದು, ಕೊನೆಗೆ ಹೊಸಕೋಟೆ ಪೊಲೀಸರಿಗೆ ‌ಒಪ್ಪಿಸಲಾಗಿದೆ. ಆತನನನ್ನು ವಿಚಾರಿಸಿದ ಪೊಲೀಸರು ವಾಪಸ್ ಕಳುಹಿಸಿದ್ದರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net