

ಬೆಂಗಳೂರು: ನಗರ ಸಂಚಾರ ಪೊಲೀಸರು ಅನಧಿಕೃತ ಪಾರ್ಕಿಂಗ್ ಹಾಗೂ ಡ್ರಂಕ್ ಆ್ಯಂಡ್ ಡ್ರೈವ್ ಮಾಡುವವರ ವಿರುದ್ಧ ಆ.೧೮ರಿಂದ ಆ.೨೪ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ನಗರದ ೫೩ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ೭ ದಿನಗಳಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ಹಾಗೂ ಅತೀವೇಗ ವಾಹನ ಚಾಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ೪೭೭೪೯ ವಾಹನಗಳ ತಪಾಸಣೆ ನಡೆಸಿ ೬೬೭ ಮಂದಿ ವಿರುದ್ಧ ಮದ್ಯ ಸೇವಿ ವಾಹನ ಚಲಾಯಿಸಿದ ಪ್ರಕರಣ ದಾಖಲಾಗಿದೆ. ಹಾಗೆಯೇ ಅತೀವೇಗ ಚಾಲನೆ ಮಾಡುತ್ತಿದ್ದ ೯೦ ಮಂದಿ ವಾಹನ ಚಾಲಕರ ವಿರುದ್ಧ ದಂಡ ವಿಧಿಸಿ ೯೦ ಸಾವಿರ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಅನಧಿಕೃತ ಪಾರ್ಕಿಂಗ್:
ಅನಧಿಕೃತ ಪಾರ್ಕಿಂಗ್ ಮಾಡಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಮಾಡುತ್ತಿದ್ದ ೧೨,೦೯೭ ವಾಹನ ಸವಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ನಗರ ಸಂಚಾರ ಪೊಲೀಸರು ಪಾರ್ಕಿಂಗ್ ನಿಯಮಗಳ ಉಲ್ಲಂಘನೆಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಆ.೧೮ ರಿಂದ ೨೪ರ ವರೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಅನಧಿಕೃತವಾಗಿ ಪಾರ್ಕಿಂಗ್ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.