ರೈಲ್ವೇ ಪೊಲೀಸರಿಂದ 86 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ

drugs
Published on

ಬೆಂಗಳೂರು: ರಾಜಧಾನಿ ವರ್ಷಾಚರಣೆ ಪಾರ್ಟಿಗಳಿಗೆ ರೈಲಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ 8 ಪೆಡ್ಲರ್‌ಗಳನ್ನು ರೈಲ್ವೇ ಪೊಲೀಸರು ಬಂಧಿಸಿ 86 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ಜಪ್ತಿ ಮಾಡಿದ್ದಾರೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ರಾಜ್ಯ ರೈಲ್ವೇ ಪೊಲೀಸ್ ವಿಭಾಗದ ಎಸ್‌ಪಿ ಡಾ. ಸೌಮ್ಯಲತಾ, ಸಿಲಿಕಾನ್ ಸಿಟಿಯಲ್ಲಿ ನಡೆಯುವ ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಮಾದಕ ವಸ್ತುಗಳನ್ನು ಹೊರರಾಜ್ಯದಿಂದ ಪೂರೈಕೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿತ್ತು.

ಈ ಹಿನ್ನೆಲೆಯಲ್ಲಿ ಡಿಸೆಂಬರ್ 1 ರಿಂದ ಆರ್‌ಪಿಎ್ ಜತೆಗೆ ಜಂಟಿ ಕಾರ್ಯಾಚರಣೆ ನಡೆಸಿದ್ದು, ಐದು ಪ್ರಕರಣಗಳಲ್ಲಿ ಜಾರ್ಖಂಡ್, ಒಡಿಶಾ ಮತ್ತು ಬಿಹಾರ ಮೂಲದ 8 ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.

ರಸ್ತೆ ಮಾರ್ಗದಲ್ಲಿ ಡ್ರಗ್ಸ್ ತಂದರೆ ಸಿಕ್ಕಿಬೀಳುವ ಭಯದಿಂದ ರೈಲು ಸಾರಿಗೆ ಬಳಸುತ್ತಿದ್ದಾರೆ. ಅದರಲ್ಲಿಯೂ ಪೊಲೀಸ್ ಶ್ವಾನಗಳಿಗೂ ವಾಸನೆ ತಿಳಿಯದಂತೆ ಪ್ಯಾಕ್ ಮಾಡಿ ಟ್ರ್ಯಾಲಿ ಬ್ಯಾಗ್‌ಗಳಲ್ಲಿ ಸಾಗಾಟ ಮಾಡಲಾಗುತ್ತಿದೆ. ಆರೋಪಿಗಳ ಚಲನವಲನದ ಮೇಲೆ ನಿಗಾ ವಹಿಸಿ ಪತ್ತೆಹಚ್ಚಲಾಗುತ್ತಿದೆ.

ಪ್ರಶಾಂತಿ ಎಕ್ಸ್‌ಪ್ರೆಸ್ ಮತ್ತು ಹಟಿಯಾ ಎಕ್ಸ್‌ಪ್ರೆಸ್ ರೈಲುಗಳಲ್ಲಿ ತಲಾಶ್ ನಡೆಸಿದಾಗ ಪತ್ತೆಯಾಗಿದೆ. ಆರೋಪಿಗಳ ವಿಚಾರಣೆ ನಡೆಸಿದ್ದು, ಮಾಹಿತಿ ಕಲೆ ಹಾಕಿ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಎಸ್‌ಪಿ ಸೌಮ್ಯಲತಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net