

ಬೆಂಗಳೂರು: ಚಾಮರಾಜಪೇಟೆ ವಿದೇಶಿ ಅಂಚೆ ಕಚೇರಿಯಲ್ಲಿ ೨೧.೧೭ ಕೋಟಿ ರೂ.ಮೌಲ್ಯದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳನ್ನು ವಶಕ್ಕೆ ಪಡೆದ ಪ್ರಕರಣದ ತನಿಖೆ ಮಂದುವರಿಸಿರುವ ಸಿಸಿಬಿ ಪೊಲೀಸರಿಗೆ ಬೆಂಗಳೂರಿಗೆ ಕಾನೂನು ಬದ್ಧವಾಗಿಯೇ ಹೈ-ಎಂಡ್ ಡ್ರಗ್ಸ್ ಸಪ್ಲೈ ಆಗುತ್ತಿತ್ತು ಎಂಬ ಸಂಗತಿ ಗೊತ್ತಾಗಿದೆ.
ಸೆಪ್ಟೆಂಬರ್ ೯ರಂದು ಚಾಮರಾಜಪೇಟೆ ಅಂಚೆ ಕಚೇರಿಯಲ್ಲಿ ಮಾದಕ ವಸ್ತುಗಳು ಇರುವ ೬೦೬ ಪಾರ್ಸಲ್ ಪ್ಯಾಕೆಟ್‌ಗಳು ಪತ್ತೆಯಾಗಿದ್ದವು. ಇದನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದರು.
ಈ ಪಾರ್ಸಲ್‌ಗಳ ಮೂಲ ಪತ್ತೆ ಹಚ್ಚಲು ಸಿಸಿಬಿಯ ವಿಶೇಷ ತಂಡ ತನಿಖೆ ಕೈಗೊಂಡಿತ್ತು.
ತನಿಖೆ ವೇಳೆ ಎಲ್ಲ ಪ್ಯಾಕೆಟ್‌ಗಳು ವಿದೇಶದಿಂದ ಬಂದಿರುವುದು ತಿಳಿದು ಬಂದಿದ್ದು, ಆದರೆ, ಯಾವ ಯಾವ ದೇಶದಿಂದ ಬರುತ್ತಿದ್ದವು ಎಂದು ತಿಳಿಯಲು ಹೋದಾಗ, ಅಧಿಕಾರಿಗಳಿ ಶಾಕ್ ಆಗಿತ್ತು. ಈ ಎಲ್ಲ ಡ್ರಗ್ಸ್ ಪ್ಯಾಕೆಟ್‌ಗಳು ಥೈಲ್ಯಾಂಡ್, ಹಾಂಕಾಂಗ್, ಅಮೆರಿಕ ಮತ್ತು ಬ್ರಿಟನ್‌ನಿಂದ ಬಂದಿರುವುದು ಪತ್ತೆಯಾಗಿದೆ.
ಡ್ರಗ್ ಪೆಡ್ಲರ್‌ಗಳು ಆನ್‌ಲೈನ್‌ನಲ್ಲಿ ಬುಕ್ ಮಾಡಿ ಭಾರತೀಯ ಅಂಚೆ ಮೂಲಕ ಡ್ರಗ್ಸ್ ತರಿಸಿಕೊಂಡಿರುವುದು ತಿಳಿದು ಬಂದಿದೆ. ಈ ಡ್ರಗ್ಸ್ ಅನ್ನು ಹಾಂಕಾಂಗ್, ಥೈಲ್ಯಾಂಡ್ ಮತ್ತು ಅಮೆರಿಕದ ಮಾದಕ ವಸ್ತು ಮಾರಾಟಗಾರರು ಕಳುಹಿಸುತ್ತಿದ್ದರು. ಅಲ್ಲಿ ಡ್ರಗ್ಸ್ ಸರಬರಾಜು ಕಾನೂನು ಬದ್ಧವಾಗಿದೆ. ಹೀಗಾಗಿ ಕಾನೂನು ಬದ್ಧವಾಗಿಯೇ ಈ ಮಾದಕವಸ್ತು ಪ್ಯಾಕೆಟ್‌ಗಳು ಬೆಂಗಳೂರಿನ ಚಾಮರಾಜಪೇಟೆಯ ಅಂಚೆ ಕಚೇರಿಗೆ ಬರುತ್ತಿದ್ದವು. ಈ ಸಂಬಂಧ ಸಿಸಿಬಿ ಅಧಿಕಾರಿಗಳು ಒಟ್ಟು ೧೨ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಬಿ ತಂಡ ಕೆಲ ಪೆಡ್ಲರ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪೆಡ್ಲರ್‌ಗಳ ವಿಚಾರಣೆ ವೇಳೆ ಹಾಂಕಾಂಗ್, ಥೈಲ್ಯಾಂಡ್, ಅಮೆರಿಕಾದಲ್ಲಿರುವ ಮಾದಕವಸ್ತು ಮಾರಾಟಗಾರರ ಜತೆ ಸಂಪರ್ಕ ಇರುವುದು ಪತ್ತೆಯಾಗಿದೆ. ಸಿಸಿಬಿ ವಿಶೇಷ ತಂಡ ಸದ್ಯ ಅಂತಾರಾಷ್ಟ್ರೀಯ ಡ್ರಗ್ ನೆಟ್‌ವರ್ಕ್ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.