ಡ್ರಗ್ಸ್ ಪೆಡ್ಲರ್ ಬಂಧನ: 12 ಲಕ್ಷ ರೂ. ಮೌಲ್ಯದ 20 ಕೆ.ಜಿ ವಶ

crime
Published on

ಬೆಂಗಳೂರು: ಆಟೋದಲ್ಲಿ ಗಾಂಜಾ ಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದ ಡ್ರಗ್ಸ್ ಪೆಡ್ಲರೊಬ್ಬನನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋರಮಂಗಲ ನಿವಾಸಿ ಪ್ರವೀಣ್(೨೮) ಬಂಧಿತ. ಆರೋಪಿಯಿಂದ ಸುಮಾರು ೧೨ ಲಕ್ಷ ರೂ. ಮೌಲ್ಯದ ೨೦ ಕೆ.ಜಿ. ತೂಕದ ಗಾಂಜಾ, ೧೫೦೦ ರೂ. ನಗದು, ೫೨ ಕವರ್ ಹಾಗೂ ಎರಡು ಟ್ರ್ಯಾಲಿ ಬ್ಯಾಗ್ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಅಪರಿಚಿತ ವ್ಯಕ್ತಿ ಆಟೋದಲ್ಲಿ ಮಾದಕವಸ್ತು ಸಾಗಣೆ ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾದಕವಸ್ತು ಸಮೇತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಪ್ರವೀಣ್ ಒರಿಸ್ಸಾ ಮೂಲದ ಡ್ರಗ್ಸ್ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ, ಗಿರಾಕಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ. ಒರಿಸ್ಸಾ ಮೂಲದ ಡ್ರಗ್ಸ್ ಪೆಡ್ಲರ್‌ಗಳು ಲಗೇಜ್ ಸಾಗಿಸುವ ಟ್ರ್ಯಾಲಿ ಬ್ಯಾಗ್‌ನಲ್ಲಿ ಗಾಂಜಾ ಬಚ್ಚಿಟ್ಟು ರೈಲಿನಲ್ಲಿ ನಗರಕ್ಕೆ ತರುತ್ತಿದ್ದರು. ಆರೋಪಿಯ ಪ್ರವೀಣ್ ರೈಲು ನಿಲ್ದಾಣದಲ್ಲಿ ಈ ಟ್ರ್ಯಾಲಿ ಬ್ಯಾಗ್ ಪಡೆದುಕೊಂಡು ಪ್ಯಾಸೆಂಜರ್ ಆಟೋರಿಕ್ಷಾದಲ್ಲಿ ವಿವೇಕನಗರ ಹಾಗೂ ಸುತ್ತಮುತ್ತಲ ಸ್ಥಳಕ್ಕೆ ಸಾಗಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net