

ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲದ ನಂಟು ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ನಗರದಲ್ಲಿ ಹೋಟೆಲ್, ಪಬ್ ಸೇರಿದಂತೆ 90ಕ್ಕೂ ಹೆಚ್ಚು ಖಾಯಂ ಸ್ಥಳಗಳಲ್ಲಿ ನಿರಂತವಾಗಿ ಪಾರ್ಟಿ ನಡೆದಿರುವುದು ಸಿಸಿಬಿ ಪೊಲೀಸರಿಗೆ ಗೊತ್ತಾಗಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ವಿರೇನ್ ಖನ್ನಾ, ವೈಭವ್ ಜೈನ್, ರಾಹುಲ್, ಶ್ರೀನಿವಾಸ್ ಅಲಿಯಾಸ್ ಶ್ರೀ ನೀಡಿದ ಹೇಳಿಕೆ ಆಧರಿಸಿ ಸಿಸಿಬಿ ಪೊಲೀಸರು, ಮತ್ತಷ್ಟು ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ. ಈಗಾಗಲೇ ಕೆಲ ಹೋಟೆಲ್ ಮತ್ತು ಪಬ್‌ಗಳನ್ನು ಗುರುತಿಸಿದ್ದು, ಪಾರ್ಟಿ, ನೃತ್ಯಕೂಟ ಹಾಗೂ ಇನ್ನಿತರ ಕಾರ್ಯಕ್ರಮ ನಡೆದಿರುವ ಕುರಿತು ಮಾಹಿತಿ ನೀಡುವಂತೆ ಸೂಚಿಸಿ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆಗೂ ಸುತ್ತಿಕೊಳ್ಳುತ್ತಾ ಡ್ರಗ್ಸ್ ಮಾಫಿಯಾ ಉರುಳು?
ಪಾರ್ಟಿಗಳಲ್ಲಿ ಡ್ರಗ್ಸ್ ಪೂರೈಕೆಯಾಗಿದೆ ಎಂಬುದು ಈವರೆಗಿನ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ. ಡ್ರಗ್ಸ್ ಪೆಡ್ಲರ್‌ಗಳು ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ನಟಿ ರಾಗಿಣಿ ಮತ್ತು ಸಂಜನಾ ಗಲ್ರಾನಿ ಅವರು ರಾಯಭಾರಿಗಳಂತೆ ಕೆಲಸ ಮಾಡಿರುವುದು ಸಾಕ್ಷ್ಯಗಳಿಂದ ಗೊತ್ತಾಗಿದೆ. ಅಗತ್ಯ ದಾಖಲೆಗಳಿದ್ದರೂ ದಂಧೆಯ ಬಗ್ಗೆ ಪೊಲೀಸರ ಮುಂದೆ ಬಾಯ್ಬಿಟ್ಟಿಲ್ಲ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತಾಂತ್ರಿಕ ಸಾಕ್ಷ್ಯಧಾರಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಹೋಟೆಲ್‌ಗಳಲ್ಲಿ ಪಾರ್ಟಿ ನಡೆಸಲು ಸ್ಥಳವನ್ನು ಕಾಯ್ದಿರಿಸಿರುವರ ವಿವರ ಹಾಗೂ ಪಾರ್ಟಿಯಲ್ಲಿನ ಸಿಸಿ ಕ್ಯಾಮರಾ ದೃಶ್ಯ ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿ ಸಿಸಿಬಿ ಪೊಲೀಸರು ಸೂಚಿಸಿದ್ದಾರೆ.