

ಮಾದಕವಸ್ತುಗಳ ಹಾವಳಿ ಬಗ್ಗೆ ಆಗೀಗ ವರದಿಯಾಗುತ್ತಿರುತ್ತದೆ. ಅದರಲ್ಲೂ ವಿಶೇಷವಾಗಿ ಯುವಜನರು ಹಾಗೂ ಸೆಲೆಬ್ರಿಟಿಗಳ ವಲಯದಲ್ಲಿ ಡ್ರಗ್ಸ್ ಸೇವನೆ ವ್ಯಾಪಕವಾಗಿರುವ ಬಗ್ಗೆ ತನಿಖಾ ಸಂಸ್ಥೆಗಳ ತನಿಖೆಯಲ್ಲಿ ಮಾಹಿತಿಗಳು ಹೊರಬರುತ್ತಿರುತ್ತವೆ. ಗುರುವಾರ ಬೆಂಗಳೂರು ಹಾಗೂ ಮುಂಬೈಯಲ್ಲಿ ಮಾದಕವಸ್ತು ನಿಗ್ರಹ ದಳ (ಎನ್ಸಿಬಿ) ನಡೆಸಿದ ದಾಳಿಗಳಲ್ಲಿ ಬೆಚ್ಚಿಬೀಳಿಸುವ ಮಾಹಿತಿಗಳು ಬೆಳಕಿಗೆ ಬಂದಿವೆ. ಅತ್ತ, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ಸಹ ಡ್ರಗ್ಸ್ ವಿಷಯ ತಳಕು ಹಾಕಿಕೊಂಡಿದ್ದು, ಸೂಕ್ತ ತನಿಖೆಯಿಂದ ವಾಸ್ತವಾಂಶ ಹೊರಬರಬೇಕಿದೆ. ಗುರುವಾರದ ದಾಳಿ ಸಂದರ್ಭದಲ್ಲಿ ಮೂವರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದ್ದು, ಅಪಾರ ಸಂಖ್ಯೆಯ ಮಾತ್ರೆಗಳು ಹಾಗೂ 2 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಗಳು ಕೆಲ ಮಾಹಿತಿ ಬಾಯ್ಬಿಟ್ಟಿದ್ದು, ಸ್ಯಾಂಡಲ್ವುಡ್ ನಟರು, ಸಂಗೀತಗಾರರು, ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದುದಾಗಿ ಹೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜರ್ಮನಿ, ಡೆನ್ಮಾರ್ಕ್, ಬೆಲ್ಜಿಯಂ ಮುಂತಾದೆಡೆಯಿಂದ ಪಾರ್ಸಲ್ ಬರುತ್ತಿದ್ದುದರ ಬಗ್ಗೆ ಮತ್ತು ಬಿಟ್ ಕಾಯಿನ್ ಕೊಟ್ಟು ಆನ್ಲೈನಲ್ಲಿ ಬುಕಿಂಗ್ ಮಾಡುತ್ತಿದ್ದುದರ ಕುರಿತು ಮಾಹಿತಿಗಳು ಲಭಿಸಿವೆ. ಇನ್ನೊಂದೆಡೆ, ಬೆಂಗಳೂರಿನ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ, ಆಂಧ್ರಪ್ರದೇಶದಿಂದ ಲಾರಿಯಲ್ಲಿ ಬೆಂಗಳೂರಿಗೆ ಬರುತ್ತಿದ್ದ 204 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಗಳೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸರಬರಾಜು ಮಾಡುತ್ತಿದ್ದುದರ ಬಗ್ಗೆ ಮಾಹಿತಿ ಸಿಕ್ಕಿದೆ. ಬೆಂಗಳೂರು ಮುಂತಾದ ಮಹಾನಗರಗಳಲ್ಲಿ ಪ್ರತಿಷ್ಠಿತ ಶಾಲಾಕಾಲೇಜುಗಳ ಆಸುಪಾಸು ಮಾದಕವಸ್ತುಗಳು ಮಾರಾಟವಾಗುವುದರ ಬಗ್ಗೆ ಮತ್ತು ವಿದ್ಯಾರ್ಥಿ-ಯುವಜನರೇ ಇದರ ಪ್ರಮುಖ ಗಿರಾಕಿಗಳಾಗಿರುವುದರ ಬಗ್ಗೆ ಪೊಲೀಸ್ ಹಾಗೂ ಸಂಬಂಧಿಸಿದ ಇತರ ಇಲಾಖೆಗಳಿಗೆ ಮಾಹಿತಿ ಇದೆ. ರಾಜ್ಯದಲ್ಲಿ ಡ್ರಗ್ಸ್ ಹಾವಳಿ ವಿರುದ್ಧ ಸಮರ ಸಾರುವುದಾಗಿ ಸರ್ಕಾರ ಹಲವು ಬಾರಿ ಹೇಳಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಈ ಬಗ್ಗೆ ದೃಢನಿಶ್ಚಯ ಪ್ರಕಟಿಸಿದ್ದಾರೆ. ಈ ನಿಟ್ಟಿನಲ್ಲಿ ಆಗೀಗ ಕಾರ್ಯಾಚರಣೆಗಳು ಸಹ ನಡೆಯುವುದಿದೆ. ಆದರೆ ಮಾದಕವಸ್ತುಗಳ ವಿರುದ್ಧ ಮತ್ತು ಈ ದಂಧೆಕೋರರ ವಿರುದ್ಧ ನಿರ್ಣಾಯಕ ಎಂಬಂಥ ಸಮರ ಆಗಬೇಕಿದೆ. ಅದಿಲ್ಲವಾದಲ್ಲಿ ನಮ್ಮ ಅನೇಕ ಯುವಜನರು ಅನ್ಯಾಯವಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಾರೆ. ಇದನ್ನೂ ಓದಿ: ಮಾಸ್ ಎಂಟ್ರಿ ಕೊಡಲು ಸಜ್ಜಾದ ರಾಜವರ್ಧನ್ …
ಅದರಿಂದಾಗಿ ಆಯಾ ಕುಟುಂಬಗಳಿಗೆ ಮಾತ್ರವಲ್ಲ ಒಟ್ಟಾರೆ ಸಮಾಜ ಹಾಗೂ ದೇಶಕ್ಕೂ ನಷ್ಟ. ಇದಲ್ಲದೆ, ಸಿನಿಮಾ ನಟನಟಿಯರು, ಸಂಗೀತಗಾರರು ಸೇರಿದಂತೆ ಸಮಾಜ ನಾನಾ ಗಣ್ಯ ವಲಯದಲ್ಲೂ ಡ್ರಗ್ಸ್ ಸೇವನೆ ಹವ್ಯಾಸವಿದ್ದು, ವಾರ್ಷಿಕ ಲೆಕ್ಕಕ್ಕೆ ಸಿಗದಷ್ಟು ವಹಿವಾಟು ನಡೆಯುತ್ತದೆ. ಈ ಹಣ ಯಾವ್ಯಾವ ಸಮಾಜವಿರೋಧಿ ಕೃತ್ಯಗಳಿಗೆ ಬಳಕೆಯಾಗುತ್ತದೆ ಎಂಬುದನ್ನು ಸುಲಭದಲ್ಲಿ ಊಹಿಸಲಾಗದು. ಪಂಜಾಬ್ನಂಥ ರಾಜ್ಯದಲ್ಲಿ ಮಾದಕವಸ್ತುಗಳ ಹೇರಳ ಪೂರೈಕೆ ಮೂಲಕ ಪಾಕಿಸ್ತಾನ ‘ಡ್ರಗ್ಸ್ ಭಯೋತ್ಪಾದನೆ’ಯನ್ನೇ ನಡೆಸಿತ್ತು ಎಂಬುದನ್ನು ನಾವು ಮರೆಯಬಾರದು. ಇದರಿಂದಾಗಿ ವಿಶೇಷವಾಗಿ ಅಲ್ಲಿನ ಯುವಜನರು ಈಗಲೂ ಕಷ್ಟನಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ಡ್ರಗ್ಸ್ ಪಿಡುಗು ನಿಮೂಲನೆ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕಿದೆ. ಮತ್ತು ಈ ಕಾರ್ಯದಲ್ಲಿ ಸರ್ಕಾರದ ಜತೆ ಸಮಾಜವೂ ಕೈಜೋಡಿಸಬೇಕಾಗುತ್ತದೆ.