

ಚಾಮರಾಜನಗರ: ಐಸ್ ಕ್ರೀಂಗೆ ಡ್ರಗ್ಸ್ ಸವರಿ ವಿದ್ಯಾರ್ಥಿಗಳಿಗೆ ಕೊಡುವ ಗುಮಾನಿ ಇದೆ ಎಂದು ಸಚಿವ ಸುರೇಶ್ ಕುಮಾರ್ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಯುವ ಜನತೆಯನ್ನ ಹಾಳು ಮಾಡುವವರನ್ನು ಹಿಡಿದು ಜೈಲಿಗೆ ಕಳುಹಿಸುತ್ತೇವೆ. ಡ್ರಗ್ಸ್ ವಿಚಾರವಾಗಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ಈ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದ ಸುರೇಶ್ ಕುಮಾರ್, ಡ್ರಗ್ಸ್ ಮಾಫಿಯಾವು ಸಮಾಜ ಹಾಗೂ ಯುವ ಜನಾಂಗವನ್ನು ದುರ್ಬಲ ಮಾಡಲು ಪ್ರಯತ್ನಿಸುತ್ತಿದೆ. ಇದನ್ನು ಬೇರು ಸಮೇತವಾಗಿ ಕಿತ್ತು ಹಾಕಬೇಕು. ಡ್ರಗ್ಸ್ಗೆ ಯುವ ಜನತೆ ಬಲಿಯಾಗುವುದನ್ನು ಸಮಾಜ ಸಹಿಸುವುದಿಲ್ಲ. ಮೂರು ವರ್ಷದ ಹಿಂದೆಯೇ ಈ ಬಗ್ಗೆ ಬಿಜೆಪಿ ಧ್ವನಿ ಎತ್ತಿದೆ ಎಂದು ತಿಳಿಸಿದರು.