

ಬೆಂಗಳೂರು: ನಟ ದಿಗಂತ್, ನಟಿ ಐಂದ್ರಿತಾ ದಂಪತಿಗೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ನೋಟಿಸ್ ತಲುಪಿದಾಗ ಅವರು ಎಲ್ಲಿದ್ದರು? ಅವರ ಕುಟುಂಬದ ಮೂಲಗಳು ಹೇಳುವ ಪ್ರಕಾರ, ಅವರು ಕೇರಳದಲ್ಲಿ ಜಾಲಿ ಟ್ರಿಪ್‌ನಲ್ಲಿದ್ದರು!
ಡ್ರಗ್ ದಂಧೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶೇಖ್ ಫಾಜಿಲ್ ಜತೆ ಐಂದ್ರಿತಾ ಇರುವ ಫೋಟೋಗಳು ಈಗಾಗಲೇ ವೈರಲ್ ಆಗಿದ್ದವು. ಅದರ ವಿವರಗಳು ಮಾಧ್ಯಮಗಳಲ್ಲಿ ಹರಿದಾಡತೊಡಗಿದಾಗ ಸ್ವತಃ ಐಂದ್ರಿತಾ ಫೋನ್ ಮೂಲಕ ಸಮಜಾಯಿಷಿ ನೀಡಿದ್ದರು. ಆದರೆ ಪೊಲೀಸ್ ನೋಟಿಸ್ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ಹಾಗಾಗಿಯೇ ಹಾಯಾಗಿ ಜಾಲಿ ಟ್ರಿಪ್‌ಗೆ ಹೋಗಿದ್ದರು. ಇದನ್ನೂ ಓದಿರಿ ಫಾಝಿಲ್ ಕ್ಯಾಸಿನೋ ಪಾರ್ಟಿಯಲ್ಲಿ ಐಂದ್ರಿತಾ ರೇ, ಈ ಬಗ್ಗೆ ನಟಿ ಹೇಳಿದ್ದೇನು?
ಹಿಂದೆ ನಟಿ ರಾಗಿಣಿಗೂ ಇದೇ ರೀತಿ ವಾಟ್ಸ್‌ಆ್ಯಪ್‌ನಲ್ಲಿ ಸಿಸಿಬಿ ನೋಟಿಸ್ ಹೋಗಿತ್ತು. ಅದನ್ನು ನಿರ್ಲಕ್ಷಿಸಿದ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ವಕೀಲರನ್ನು ಕಳಿಸಿದ್ದರು. ನಾಳೆಯೇ ತಮ್ಮ ಕಕ್ಷಿದಾರರು ಹಾಜರಾಗುತ್ತಾರೆ ಎಂದು ವಕೀಲರು ಪೊಲೀಸರಿಗೆ ತಿಳಿಸಿದ್ದರು. ಆದರೆ ರಾಗಿಣಿ ಫೇಸ್‌ಬುಕ್‌ನಲ್ಲಿ ‘ಮುಂದಿನ ಸೋಮವಾರ ವಿಚಾರಣೆಗೆ ಹೋಗುತ್ತೇನೆ’ ಎಂದು ಉಡಾಫೆಯ ಮೆಸೇಜ್ ಹಾಕಿದ್ದರು. ಅದರ ಮರುದಿನವೇ ಬೆಳ್ಳಂಬೆಳಗ್ಗೆ ಪೊಲೀಸರು ರಾಗಿಣಿ ಮನೆಗೆ ರೇಡ್ ಮಾಡಿದರಲ್ಲದೆ, ವಿಚಾರಣೆಗೆ ಅವರನ್ನು ತಮ್ಮೊಂದಿಗೇ ಸಿಸಿಬಿ ಕಚೇರಿಗೂ ಕರೆತಂದರು. ದಿಗಂತ್ ಮತ್ತು ಐಂದ್ರಿತಾ ಆ ರೀತಿ ಉಡಾಫೆ ಮಾಡದೇ ತಕ್ಷಣವೇ ಪೊಲೀಸರ ನೋಟಿಸ್‌ಗೆ ಸ್ಪಂದಿಸಿದ್ದಾರೆ.
ಶ್ರೀಲಂಕಾದಲ್ಲಿ ಕ್ಯಾಸಿನೋ ಪಾರ್ಟಿಗಳ ಆಯೋಜಕ, ಶಾಸಕ ಜಮೀರ್ ಅಹಮ್ಮದ್ ಖಾನ್ ಆಪ್ತ ಶೇಖ್ ಫಾಜಿಲ್, ಜತೆ ನಟ ದಿಗಂತ್ ದಂಪತಿಗೆ ಒಡನಾಟ ಇತ್ತು. ನಟಿ ರಾಗಿಣಿ ದ್ವಿವೇದಿಯೊಂದಿಗೂ ನಟಿ ಐಂದ್ರಿತಾ ಆತ್ಮೀಯರಾಗಿದ್ದರು. ಪಬ್, ಹೋಟೆಲ್, ಕ್ಲಬ್, ರೆಸಾರ್ಟ್ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ನಡೆದಿದ್ದ ಪಾರ್ಟಿಗಳಿಗೆ ಸ್ಟಾರ್ ದಂಪತಿ ಹೋಗಿದ್ದರು ಎಂಬ ಆರೋಪವಿದೆ. ವಿಚಾರಣೆ ವೇಳೆ ರಾಗಿಣಿ ಮತ್ತು ಸಂಜನಾ ಸಹ ಸ್ಟಾರ್ ದಂಪತಿ ಹೆಸರು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿರಿ PHOTOS/ ಡ್ರಗ್ಸ್ ದಂಧೆಯ ಕಿಂಗ್ಪಿನ್ ಜತೆ ಐಂದ್ರಿತಾ ಪೋಸ್
ಈ ಮಧ್ಯೆ, ಮಾದಕ ವಸ್ತು ಮಾರಾಟ ಪ್ರಕರಣದ ಎ1 ಶಿವಪ್ರಕಾಶ್ ಚಪ್ಪಿ ಮತ್ತು ಶ್ರೀಲಂಕಾದ ಕ್ಯಾಸಿನೋ ಆಯೋಜಕ ಶೇಖ್ ಫಾಜಿಲ್ ಜತೆ ಐಂದ್ರಿತಾ ತೆಗೆಸಿಕೊಂಡಿರುವ ಫೋಟೋ, ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಐಂದ್ರಿತಾ, ಕ್ಯಾಸಿನೋದಲ್ಲಿ ‘ಈದ್ ಆಚರಣೆಗೆ ಕ್ಯಾಸಿನೋ ಹೋಗುತ್ತಿರುವುದು ಖುಷಿಯಾಗಿದೆ ಎಂದು ಹೇಳಿಕೆ ನೀಡಿದ್ದರು. ಮೋಜು ಮಸ್ತಿ ವಿಡಿಯೋಗಳು ಚರ್ಚೆ ಹುಟ್ಟು ಹಾಕಿದ್ದು, ಇದೀಗ ದಂಪತಿಗೆ ಡ್ರಗ್ಸ್ ಜಾಲದ ಉರುಳು ಸುತ್ತಿಕೊಳ್ಳಲು ಕಾರಣವಾಗಿವೆ.
ಚಲನಚಿತ್ರ ರಂಗದಲ್ಲಿ ಮಾದಕ ವಸ್ತು ದಂಧೆ ಮತ್ತು ಪೇಜ್-3 ಪಾರ್ಟಿಗಳಲ್ಲಿ ಡ್ರಗ್ಸ್ ಪೂರೈಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಮತ್ತು ಎನ್‌ಸಿಬಿ ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿವೆ. ವಿಚಾರಣೆಯಲ್ಲಿ ದಿಗಂತ್ ಮತ್ತು ಐಂದ್ರಿತಾ ನೀಡುವ ಹೇಳಿಕೆ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಜಂಟಿ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.