

ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟಿನ ಪ್ರಕರಣ ಸಂಬಂಧ ತಾರಾದಂಪತಿ ಐಂದ್ರಿತಾ ರೇ ಮತ್ತು ದಿಗಂತ್ರ ಮೊದಲ ಸುತ್ತಿನ ಸಿಸಿಬಿ ವಿಚಾರಣೆ ಮುಕ್ತಾಯವಾಗಿದೆ.
ಬುಧವಾರ ಬೆಳಗ್ಗೆ 11.15ರಿಂದ ಮಧ್ಯಾಹ್ನ 2.30ರವರೆಗೂ ದಿಗಂತ್ ಮತ್ತು ಐಂದ್ರಿತಾರನ್ನು ಪ್ರತ್ಯೇಕವಾಗಿ ನಿರಂತರ ವಿಚಾರಣೆ ನಡೆಸಿದ ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಮಾಫಿಯಾ ಕುರಿತು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಸದ್ಯಕ್ಕೆ ಈ ದಂಪತಿ ನಿರಾಳವಾಗಿದ್ದರೂ ಮತ್ತೊಮ್ಮೆ ಸಮನ್ಸ್ ಕೊಡುವುದಾಗಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಇದನ್ನೂ ಓದಿರಿ PHOTOS/ ಡ್ರಗ್ಸ್ ದಂಧೆಯ ಕಿಂಗ್ಪಿನ್ ಜತೆ ಐಂದ್ರಿತಾ ಪೋಸ್
ಡ್ರಗ್ಸ್ ದಂಧೆ ಪ್ರಕರಣದ ಪ್ರಮುಖ ಆರೋಪಿ ಶೇಖ್ ಫಾಝಿಲ್ನ ಕ್ಯಾಸಿನೋ ಪಾರ್ಟಿಗಳಲ್ಲಿ ಐಂದ್ರಿತಾ ಕಾಣಿಸಿಕೊಂಡಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರ್ ಆಗುವಂತೆ ಮಂಗಳವಾರ ಸಂಜೆ ಕೇರಳಾದಲ್ಲಿದ್ದ ಐಂದ್ರಿತಾ ದಂಪತಿಗೆ ವಾಟ್ಸ್ಆ್ಯಪ್ ಮೂಲಕ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ದಿಗಂತ್, 'ನಾವು ಎಲ್ಲೂ ತಲೆ ಮರೆಸಿಕೊಂಡಿಲ್ಲ. ವಿಚಾರಣೆಗೆ ಹಾಜರಾಗ್ತೀವಿ' ಎಂದಿದ್ದರು. ಐಂದ್ರಿತಾ ಕೂಡ, 'ಸಿಸಿಬಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ನಿಗದಿತ ಸಮಯಕ್ಕೆ ಸರಿಯಾಗಿ ಬೆಂಗಳೂರಿನ ಸಿಸಿಬಿ ಕಚೇರಿಗೆ ಬರುತ್ತೇವೆ' ಎಂದು ಟ್ವಿಟರ್ನಲ್ಲಿ ಸ್ಪಷ್ಟಪಡಿಸಿದ್ದರು.
ಮಂಗಳವಾರ ತಡರಾತ್ರಿಯೇ ಬೆಂಗಳೂರಿಗೆ ಬಂದ ದಿಗಂತ್- ಐಂದ್ರಿತಾ ರೇ, ಬುಧವಾರ ಬೆಳಗ್ಗೆ 11.15ಕ್ಕೆ ಸಿಸಿಬಿ ಕಚೇರಿಗೆ ಹಾಜರಾಗಿದ್ದರು.