

| ಅವಿನಾಶ ಮೂಡಂಬಿಕಾನ ಬೆಂಗಳೂರು
ಕರೊನಾ ಲಾಕ್ಡೌನ್ನಿಂದಾಗಿ ಬಹುತೇಕ ವ್ಯಾಪಾರ ವ್ಯವಹಾರಗಳು, ಕೈಗಾರಿಕೆಗಳು ಸಂಕಷ್ಟ ಅನುಭವಿಸಿವೆ. ಆದರೆ, ಡ್ರಗ್ಸ್ ಮಾರಾಟ ದಂಧೆ ಮಾತ್ರ ಹುಲುಸಾಗಿ ಬೆಳೆದಿದೆ! ಲಾಕ್ಡೌನ್ ಅವಧಿಯಲ್ಲಿ ಅಗತ್ಯಸೇವೆಗಳ ಪೂರೈಕೆಗೆ ನೀಡಲಾಗಿರುವ ಅವಕಾಶವನ್ನೇ ಬಂಡವಾಳ ಮಾಡಿಕೊಂಡ ಡ್ರಗ್ಸ್ ಮಾರಾಟ ದಂಧೆಕೋರರು ಸಾಮಾಜಿಕ ಜಾಲತಾಣಗಳಲ್ಲೇ ಡೀಲ್ ಕುದುರಿಸಿ ಮಾದಕ ವಸ್ತುಗಳನ್ನು ಮನೆಗಳಿಗೆ ಪೂರೈಸುತ್ತಿದ್ದಾರೆ. ಈ ಆನ್ಲೈನ್ ವೇದಿಕೆಯಲ್ಲಿ ನೂರಾರು ಕೋಟಿ ರೂ.ವ್ಯವಹಾರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಆನ್ಲೈನ್ನಲ್ಲೇ ಡ್ರಗ್ಸ್ ವ್ಯಸನಿಗಳನ್ನು ಸಂರ್ಪಸಿ, ಅವರಿಂದ ತಮ್ಮ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡು, ಅವರ ಮನೆ ಬಾಗಿಲಿಗೇ ಮಾದಕ ವಸ್ತು ಪೂರೈಸುವ ವ್ಯವಸ್ಥೆ ಹುಟ್ಟಿಕೊಂಡಿದೆ. ಪೆಡ್ಲರ್ಗಳ ಈ ಹೊಸ ಪ್ಲಾ್ಯನ್ನಿಂದ ಸ್ಥಳೀಯ ಪೊಲೀಸರು, ಎನ್ಸಿಬಿ ಹಾಗೂ ಇತರ ತನಿಖಾ ಸಂಸ್ಥೆಗಳಿಗೆ ಡ್ರಗ್ಸ್ ಜಾಲದ ಜಾಡು ಹಿಡಿಯುವುದೇ ಸವಾಲಾಗಿದೆ. ಈ ನಡುವೆಯೇ, ಕಳೆದ 12 ತಿಂಗಳಲ್ಲಿ 50.23 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ.
ಕಳೆದ ಐದೂವರೆ ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು 10,949 ಡ್ರಗ್ಸ್ ಪ್ರಕರಣಗಳು ಬೆಳಕಿಗೆ ಬಂದಿವೆ. 2020ರಲ್ಲಿಯೇ 4,066 ಕೇಸ್ ದಾಖಲಾಗಿದ್ದು, 5,291 ಪೆಡ್ಲರ್ಗಳನ್ನು ಬಂಧಿಸಲಾಗಿದೆ. 2021ರಲ್ಲಿ ಲಾಕ್ಡೌನ್ ವೇಳೆ ಬಿಗಿ ಪೊಲೀಸ್ ಪಹರೆ ನಡುವೆಯೂ ಕರ್ನಾಟಕದಲ್ಲಿ 300 ಕೋಟಿ ರೂ.ಗೂ ಅಧಿಕ ಮೊತ್ತದ ಡ್ರಗ್ಸ್ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ. ಕಳೆದ 4 ತಿಂಗಳಲ್ಲಿ ರಾಜ್ಯದಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ 1,819 ಕೇಸ್ ದಾಖಲಾಗಿದೆ.
ಡ್ರಗ್ಸ್ ಹೇಗೆ ಸಿಗುತ್ತೆ?: ಡಾರ್ಕ್ ವೆಬ್ನ ಟಾರ್ ಬ್ರೋಸರ್ ಹಾಗೂ ಡ್ರಿಯೇಡ್ ವೆಬ್ಸೈಟ್ನಿಂದ ವಿವಿಧ ಬಗೆಯ ಡ್ರಗ್ಸ್ ಬಗ್ಗೆ ಮಾಹಿತಿ ಪಡೆಯುವ ಪೆಡ್ಲರ್ಗಳು, ವಿಕ್ಕರ್-ಮೀ ಆಪ್ನಲ್ಲಿ ವೆಗೆಟರ್ ಎಂಬ ಸ್ಥಳೀಯ ವೆಂಡರ್ನಿಂದ ಬಿಟ್ ಕಾಯಿನ್ ಮೂಲಕ ಹಣ ಪಾವತಿಸಿ ಕಡಿಮೆ ಬೆಲೆಗೆ ಎಂಡಿಎಂಎ, ಎಕ್ಸ್ಟಸಿ ಮಾತ್ರೆ, ಎಲ್ಎಸ್ಡಿ ಸ್ಟಿಪ್ಸ್ ನಂತಹ ಬೆಲೆ ಬಾಳುವ ಡ್ರಗ್ಸ್ ಖರೀದಿಸುತ್ತಾರೆ. ನಂತರ ಕೊರಿಯರ್ ಮೂಲಕ ತಾವಿದ್ದಲ್ಲಿಗೆ ತರಿಸಿಕೊಳ್ಳುತ್ತಾರೆ. ಜತೆಗೆ ವಿದೇಶಗಳಿಂದ ಕೊರಿಯರ್ ಮುಖಾಂತರ ಕಾಗೋ ವಿಮಾನಗಳಲ್ಲೂ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಡ್ರಗ್ಸ್ಗಳು ಆಮದಾಗುತ್ತಿವೆ. ಗಾಂಜಾವನ್ನು ಆಂಧ್ರ ಪ್ರದೇಶ, ತಮಿಳುನಾಡು, ಅಸ್ಸಾಂ, ನೇಪಾಳದಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.
ಯಾವ ಡ್ರಗ್ಸ್ಗೆ ಬೇಡಿಕೆ?: ಗಾಂಜಾ, ಅಫೀಮು, ಕೊಕೇನ್, ಹ್ಯಾಶಿಶ್, ಹೆರಾಯಿನ್, ಕೆಟಾಮಿನ್, ಚರಸ್, ಎಂಡಿಎಂಎ ಮಾತ್ರೆ, ಎಲ್ಎಸ್ಡಿ ಮಾದಕ ವಸ್ತು
ಟಾರ್ಗೆಟ್ ಯಾರು?: ಟೆಕ್ಕಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಶ್ರೀಮಂತ ವರ್ಗದ ಯುವಕ ಹಾಗೂ ಯುವತಿಯರು. ್ಮಕೂಲಿ ಕಾರ್ವಿುಕರು ಹಾಗೂ ಬಡವರನ್ನು ಕೂಡ ಟಾರ್ಗೆಟ್ ಮಾಡ್ತಾರೆ.
ಶಿಕ್ಷೆ ಏನು?: ಡ್ರಗ್ಸ್ ಪೂರೈಸುವಾಗ ಸಿಕ್ಕಿಬಿದ್ದು, ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖ ಲಾಗಿ, ಅಪರಾಧ ಎಸಗಿರು ವುದು ಸಾಬೀತಾದರೆ ಕನಿಷ್ಠ 10 ವರ್ಷ ಜೈಲು ಶಿಕ್ಷೆ ಆಗು ತ್ತದೆ. ಬಹುತೇಕ ಪ್ರಕರಣಗಳಲ್ಲಿ ಜಾಮೀನು ಸಿಗುವುದರಿಂದ ಮತ್ತೆ ದಂಧೆಯಲ್ಲಿ ತೊಡಗುತ್ತಾರೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ವಿದೇಶಿಗರೇ ಜಾಸ್ತಿ: ನೈಜೀರಿಯಾ ಸೇರಿ ಆಫ್ರಿಕಾ ಖಂಡದ ಪ್ರಜೆಗಳು ಡ್ರಗ್ಸ್ ದಂಧೆಯಲ್ಲಿ ಹೆಚ್ಚು ಭಾಗಿಯಾಗಿದ್ದಾರೆ. ರಾಜ್ಯದಲ್ಲಿರುವ ದಂಧೆಯಲ್ಲಿ ಶೇ.40 ವಿದೇಶಿಯರಿದ್ದಾರೆ. ಪ್ರವಾಸ, ವ್ಯಾಸಂಗ, ಉದ್ಯಮದ ಹೆಸರಿನಲ್ಲಿ ವೀಸಾ ಪಡೆದು ರಾಜ್ಯಕ್ಕೆ ಬರುವ ಇವರು ವೀಸಾ ಅವಧಿ ಮುಗಿದ ನಂತರವೂ ಇಲ್ಲೇ ಅಕ್ರಮವಾಗಿ ಉಳಿಯುತ್ತಾರೆ. ಬಾಂಗ್ಲಾ, ನೇಪಾಳ ಪ್ರಜೆಗಳೂ ಅಕ್ರಮವಾಗಿ ದೇಶಕ್ಕೆ ನುಸುಳಿ ರಾಜಾರೋಷವಾಗಿ ಡ್ರಗ್ಸ್ ದಂಧೆ ನಡೆಸುತ್ತಿದ್ದಾರೆ.
ರಾಜ್ಯದ ಹಲವೆಡೆ ಕಳೆದ ವರ್ಷ ವಶಪಡಿಸಿಕೊಳ್ಳ ಲಾದ 50 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮಾದಕವಸ್ತು ಗಳನ್ನು ಶನಿವಾರ ನಾಶ ಪಡಿಸಲಾಗುವುದು.
| ಬಸವರಾಜ ಬೊಮ್ಮಾಯಿ ಗೃಹ ಸಚಿವ
ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ನಿಯಂತ್ರಿಸಲು ಪೊಲೀಸರು ಶ್ರಮಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ದಂಧೆಯಲ್ಲಿ ತೊಡಗುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ವಿದೇಶಿ ಪೆಡ್ಲರ್ಗಳನ್ನು ಮಟ್ಟಹಾಕಲು ಕ್ರಮ ಕೈಗೊಳ್ಳಲಾಗಿದೆ.
| ಕಮಲ್ ಪಂತ್ ಪೊಲೀಸ್ ಆಯುಕ್ತರು, ಬೆಂಗಳೂರು