ಮಾದಕ ವಸ್ತು ಸೇವನೆಯಿಂದ ದೂರವಿರಿ; ನಟ ಶಿವರಾಜಕುಮಾರ

26-RNR-05
Published on

ರಾಣೆಬೆನ್ನೂರ: ಮಾದಕ ವಸ್ತು ಸೇವನೆ ವಿರುದ್ಧ ಪ್ರತಿಯೊಬ್ಬರೂ ಜಾಗೃತಿ ಮೂಡಿಸಬೇಕು. ಇದರಿಂದ ಆಗುವ ಅನಾಹುತ ಹಾಗೂ ಕುಟುಂಬದ ಪರಿಸ್ಥಿತಿ ಸೇರಿ ಪ್ರತಿಯೊಬ್ಬರೂ ಜಾಗೃತಿ ಮೂಡಿಸಿದಾಗ ಮಾತ್ರ ಮಾದಕ ವಸ್ತು ಬಳಕೆಗೆ ಕಡಿವಾಣ ಹಾಕಲು ಸಾಧ್ಯ ಎಂದು ಹ್ಯಾಟ್ರಿಕ್​ ಹೀರೋ ಡಾ. ಶಿವರಾಜಕುಮಾರ ಹೇಳಿದರು.

ನಗರದ ಶಂಕರ ಚಿತ್ರಮಂದಿರದಲ್ಲಿ ಮಂಗಳವಾರ ಭೈರತಿ ರನಗಲ್ಲ ಚಿತ್ರದ ಪ್ರಚಾರ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾದಕ ವಸ್ತು ಸೇವನೆ ಬಿಡಿಸುವುದರಲ್ಲಿ ಸ್ನೇಹಿತರ ಪಾತ್ರವೂ ಬಹಳ ಮುಖ್ಯವಾಗಿದೆ. ನಿಮ್ಮ ಸ್ನೇಹಿತ ಮಾದಕ ವಸ್ತುಗಳ ಕಡೆ ಹೋಗುತ್ತಿದ್ದಾನೆ ಎನ್ನುವ ವಿಷಯ ತಿಳಿದ ಕೂಡಲೇ ಆತನಿಗೆ ಬುದ್ಧಿವಾದ ಹೇಳಬೇಕು. ಕೇಳದಿದ್ದರೆ ಆತನ ಕುಟುಂಬದವರಿಗೆ ಅಥವಾ ಹಿರಿಯರಿಗೆ ತಿಳಿಸಬೇಕು. ಅದರಿಂದ ಆತನನ್ನು ಹೊರ ತರಲು ಎಲ್ಲ ರೀತಿಯ ಪ್ರಯತ್ನ ಮಾಡಬೇಕು ಎಂದರು.

ನಾವು ಬಹಳಷ್ಟು ಸಿನಿಮಾಗಳ ಮೂಲಕ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ತೋರಿಸಿದ್ದೇವೆ. ಓದುವ, ಬರೆಯುವ, ಒಳ್ಳೆಯವರ ಸಂಗ ಮಾಡಬೇಕು. ನಮ್ಮ ದೇಹ ಹಾಳು ಮಾಡುವ ನಶೆಯಂತಹ ವಸ್ತುಗಳಿಂದ ದೂರವಿರಬೇಕು ಎಂದರು.

ಕನ್ನಡ ಚಿತ್ರರಂಗ ಬೆಳೆಯಬೇಕು. ಅದಕ್ಕಾಗಿ ಕಾಂತಾರ, ಕೆಜಿಎ್​ನಂತಹ ಚಿತ್ರಗಳು ಇನ್ನಷ್ಟು ಬರಬೇಕು. ಪ್ರತಿಯೊಬ್ಬರೂ ಕನ್ನಡ ಸಿನಿಮಾಗಳನ್ನು ನೋಡಬೇಕು. ಅಂದಾಗ ಕನ್ನಡ ಚಿತ್ರರಂಗ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.

ಗೀತಾ ಶಿವರಾಜಕುಮಾರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net