

ಬೆಂಗಳೂರು: ವಿದೇಶದಿಂದ ಅಕ್ರಮವಾಗಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದ ವಿದೇಶಿ ಪ್ರಯಾಣಿಕನನ್ನು ಕಂದಾಯ ನಿರ್ದೇಶನಾಲಯದ ಗುಪ್ತಚರ (ಡಿಆರ್‌ಐ) ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಕೀನ್ಯಾದ ಒದಿಹಾಂಬೋ ಮಾರ್ಗನ್ ಬೈರನ್ ಬಂಧಿತ. ಆರೋಪಿಯಿಂದ ಸುಮಾರು ೩೦ ಕೋಟಿ ರೂ.ಮೌಲ್ಯದ ೩ ಕೆ.ಜಿ.ಕೊಕೇನ್ ಜಪ್ತಿ ಮಾಡಿದ್ದಾರೆ.
ದೋಹಾದಿಂದ ಇಂಡಿಗೋ ೬ಎ ೧೩೦೨ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರ ಲಗೇಜ್‌ಗಳನ್ನು ಡಿಆರ್‌ಐ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಕಿನ್ಯಾ ಪ್ರಜೆಯ ಲಗೇಜ್‌ನೊಳಗೆ ಪೇಸ್ಟ್ ರೂಪದಲ್ಲಿ ೩ ಕೆ.ಜಿ.ಕೊಕೇನ್ ಪತ್ತೆಯಾಗಿದೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದಿರುವ ಡಿಆರ್‌ಐ ಅಧಿಕಾರಿಗಳು ಕೊಕೇನ್ ಜಪ್ತಿ ಮಾಡಿದ್ದಾರೆ. ಆರೋಪಿಯು ವಿದೇಶದಿಂದ ಅಕ್ರಮವಾಗಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಡಿಆರ್‌ಐ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.