ಪಿಐಟಿ-ಎನ್‌ಡಿಪಿಎಸ್ ಕಾಯ್ದೆಯಡಿ ಡ್ರಗ್ ಪೆಡ್ಲರ್ ಸೆರೆ

Crime Logo
Published on

ಬೆಂಗಳೂರು: ಬೇರೆ ರಾಜ್ಯಗಳಿಂದ ಮಾದಕವಸ್ತು ಗಾಂಜಾ ತಂದು ನಗರದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್‌ನೊಬ್ಬನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಮಾದಕ ದ್ರವ್ಯ ಹಾಗೂ ಮಾದಕಯುಕ್ತ ವಸ್ತುಗಳ ಅಕ್ರಮ ಸಾಗಣೆ ತಡೆ (ಪಿಐಟಿ-ಎನ್‌ಡಿಪಿಎಸ್) ಕಾಯ್ದೆಯಡಿ ಬಂಧಿಸಿದ್ದಾರೆ.

ಕೋರಮಂಗಲದ ವೆಂಕಟಾಪುರ ನಿವಾಸಿ ಪ್ರವೀಣ್ ಕುಮಾರ್(೩೦) ಬಂಧಿತ. ಆರೋಪಿಯು ಕಳೆದ ಮೂರು ವರ್ಷಗಳಿಂದ ಹೊರರಾಜ್ಯಗಳಿಂದ ನಿಷೇಧಿತ ಮಾದಕವಸ್ತು ಗಾಂಜಾವನ್ನು ನಗರಕ್ಕೆ ತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ. ಈತನ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಪಿಐಟಿ-ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲು ಅನುಮತಿ ಕೋರಿ ಹಲಸೂರು ಗೇಟ್ ಠಾಣೆ ಪೊಲೀಸರು ನಗರ ಪೊಲೀಸ್ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆ ಸಮ್ಮತಿ ಸಿಕ್ಕ ಬೆನ್ನಲ್ಲೇ ಪೊಲೀಸರು ಆರೋಪಿ ಪ್ರವೀಣ್‌ನನ್ನು ಬಂಧಿಸಿ ಶಿವಮೊಗ್ಗ ಜೈಲಿಗಟ್ಟಿದ್ದಾರೆ.

ಆರೋಪಿ ಪ್ರವೀಣ್ ವಿರುದ್ಧ ಮೂರು ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಆರೋಪಿಯು ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಅಂತೆಯೇ ಮತ್ತೆ ನಿಷೇಧಿತ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ. ಹೀಗಾಗಿ ಆರೋಪಿಯನ್ನು ಪಿಐಟಿ-ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿ ಒಂದು ವರ್ಷ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net