ಸಿಸಿಬಿ ನೋಟಿಸ್: ನಿರೂಪಕ ಅಕುಲ್ ಬಾಲಾಜಿ ಹೇಳಿದ್ದೇನು?

akul balagi april
Published on

ಬೆಂಗಳೂರು: ಚಾಮರಾಜಪೇಟೆ ಪೊಲೀಸ್​ ಠಾಣೆಯ ಡ್ರಗ್ಸ್​ ಕೇಸ್​ ಸಂಬಂಧ ಸಿಸಿಬಿ ಪೊಲೀಸರು ಕಿರುತೆರೆಯ ಖ್ಯಾತ ನಿರೂಪಕ ಅಕುಲ್​ ಬಾಲಾಜಿ ಅವರಿಗೆ ನೋಟಿಸ್​ ಜಾರಿ ಮಾಡಿದ್ದಾರೆ. ಶನಿವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಸಿಸಿಬಿ ಕಚೇರಿಗೆ ಹಾಜರಾಗಬೇಕಿದೆ.

ಸದ್ಯ ತೆಲಂಗಾಣದ ಹೈದ್ರಾಬಾದ್​ನಲ್ಲಿರುವ ಅಕುಲ್​ ಬಾಲಾಜಿ, ಸಿಸಿಬಿ ನೋಟಿಸ್​ ವಿಚಾರವಾಗಿ 'ದಿಗ್ವಿಜಯ ನ್ಯೂಸ್​' ಜೊತೆ ಮಾತನಾಡಿದರು. 'ಹೌದು, ನನಗೆ ಸಿಸಿಬಿ ನೋಟಿಸ್​ ವಾಟ್ಸ್​ಆ್ಯಪ್​ ಮುಖಾಂತರ ತಲುಪಿದೆ. ನಾನು ವಿಚಾರಣೆಗೆ ನಾಳೆ ಹಾಜರ್​ ಆಗ್ತೀನಿ. ಆದ್ರೆ ಅವರು ಯಾವ ವಿಚಾರಕ್ಕೆ ನೋಟಿಸ್​ ಕೊಟ್ಟಿದ್ದಾರೆ ಎಂಬುದು ಗೊತ್ತಾಗಿಲ್ಲ. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವೆ' ಎಂದರು. ಇದನ್ನೂ ಓದಿರಿ ಡ್ರಗ್ಸ್​ ಕೇಸ್​; ಅಕುಲ್​ ಬಾಲಾಜಿ, ಪ್ರಭಾವಿ ರಾಜಕಾರಣಿಯ ಪುತ್ರ ಸೇರಿ ಮೂವರಿಗೆ ಸಿಸಿಬಿ ನೋಟಿಸ್​

'ಸಿಸಿಬಿ ಕಚೇರಿಗೆ ಖಂಡಿತ ಬರುವೆ' ಎಂದ ಅಕುಲ್​ ಬಾಲಾಜಿ, 'ನಮಗೆ ಏನಮ್ಮ ಸಂಬಂಧ ಇದೆ, ನಾವೆಲ್ಲ ಅಂತಹ ಪಾರ್ಟಿಗಳಿಗೆ ಹೋಗೋರಲ್ಲ. ನೀವಾದರೂ ನಾನು ಎಲ್ಲಿಯಾದರೂ ಅಂತಹ ಪಾರ್ಟಿಗಳಿಗೆ ಹೋಗಿರುವುದನ್ನು ನೋಡಿದ್ದೀರಾ?' ಎಂದು ಮರುಪ್ರಶ್ನೆ ಮಾಡುವ ಮೂಲಕ ಡ್ರಗ್ಸ್​ ಪೆಡ್ಲರ್​ಗಳ ಜೊತೆ ತನಗೆ ಯಾವ ಲಿಂಕ್​ ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದರು.

ಇನ್ನು ಶುಕ್ರವಾರ ಒಂದೇ ದಿನ ಅಕುಲ್​ ಬಾಲಾಜಿ ಜತೆಗೆ ಬಿಬಿಎಂಪಿ ಕಾರ್ಪೋರೇಟರ್​ ಆರ್​.ವಿ.ಯುವರಾಜ್​ ಮತ್ತು 'ನೂರು ಜನ್ಮಕ್ಕೂ' ಸಿನಿಮಾ ನಟ ಸಂತೋಷ್​ ಕುಮಾರ್​ ಅವರಿಗೂ ಸಿಸಿಬಿ ನೋಟಿಸ್​ ಜಾರಿ ಮಾಡಿದೆ. ಈ ಮೂವರು ಶನಿವಾರ ಬೆಳಗ್ಗೆ 10 ಗಂಟೆಗೆ ಸಿಸಿಬಿ ಕಚೇರಿಗೆ ಹಾಜರ್​ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net