ನಶೆಯ ಉರುಳು!: ರಾಜ್ಯದಲ್ಲಿ ವಾರ್ಷಿಕ 1200 ಮಾದಕ, ಮದ್ಯವ್ಯಸನಿಗಳ ಆತ್ಮಹತ್ಯೆ

Drugs
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ಕುಡಿತ ಹಾಗೂ ಮಾದಕ ವಸ್ತುಗಳ ಮತ್ತಿನಲ್ಲಿ ಪ್ರತಿ ವರ್ಷ ದೇಶಾದ್ಯಂತ ಸುಮಾರು 8500 ವ್ಯಸನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಪೈಕಿ ಕರ್ನಾಟಕವೊಂದರಲ್ಲೇ ವಾರ್ಷಿಕ 1200 ವ್ಯಸನಿಗಳು ಅದರಲ್ಲೂ ಯುವಕರು ಸಾವಿಗೆ ಶರಣಾಗುತ್ತಿದ್ದಾರೆಂಬುದು ತೀವ್ರ ಕಳವಳ ಮೂಡಿಸಿದೆ. ಬಡತನ, ನಿರುದ್ಯೋಗ, ಸಾಲ, ದಿವಾಳಿತನ, ಪರೀಕ್ಷೆಯಲ್ಲಿ ಅನುತ್ತೀರ್ಣ, ಆಸ್ತಿ ವಿವಾದಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವವರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಮಾದಕ ಹಾಗೂ ಮದ್ಯದ ಚಟಕ್ಕೆ ಬಿದ್ದವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಪ್ರೀತಿ-ಪ್ರೇಮದ ವಿಚಾರ ಶೇ.4.5, ಮದುವೆ ಸಂಬಂಧಿತ ವಿಚಾರ ಶೇ.5.5 ಇದ್ದರೆ, ಮಾದಕ ಹಾಗೂ ಮದ್ಯಪಾನ ಚಟದ ಶೇ.6.0 ವ್ಯಸನಿಗಳು ಸಾವಿಗೆ ಶರಣಾಗುತ್ತಿದ್ದಾರೆ.

ವ್ಯಸನಿಗಳ ಆತ್ಮಹತ್ಯೆ ಪಟ್ಟಿಯಲ್ಲಿ ದೇಶದಲ್ಲಿ ಮಹಾರಾಷ್ಟ್ರ (6745 ಜನ) ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ (3840 ಜನ) ದ್ವಿತೀಯ ಸ್ಥಾನದಲ್ಲಿದೆ. ತಮಿಳುನಾಡು (3452 ಜನ) 3ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಕಳೆದ 3 ವರ್ಷದಲ್ಲಿ ಒಟ್ಟಾರೆ 35,099 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 3840 ಮಂದಿ ವ್ಯಸನಿಗಳು ಎನ್ನುವ ವಿಚಾರ ಕೇಂದ್ರ ಸರ್ಕಾರದ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.

ಎನ್​ಸಿಬಿ, ಸ್ಥಳೀಯ ಪೊಲೀಸರು ಹಾಗೂ ರಾಜ್ಯ ಮತ್ತು ಕೇಂದ್ರದ ತನಿಖಾ ಸಂಸ್ಥೆಗಳು 2020ರಲ್ಲಿ ದೇಶಾದ್ಯಂತ ಕಾರ್ಯಾಚರಣೆ ನಡೆಸಿ 13,69,944 ಕೆಜಿ ಹಾಗೂ 11,04,231 ಲೀಟರ್ ನಾಕೋಟಿಕ್ ಡ್ರಗ್ಸ್ ಜಪ್ತಿ ಮಾಡಿವೆ. ಗಾಂಜಾ, ಅಫೀಮು, ಕೊಕೇನ್​ನಂತಹ ಮಾದಕ ದ್ರವ್ಯ ಜಾಸ್ತಿ. ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಪೂರ್ಣಪ್ರಮಾಣದಲ್ಲಿ ತಡೆಯಲು ಸಾಧ್ಯವಾಗಿಲ್ಲ.

ಐದು ರಾಜ್ಯಗಳಲ್ಲಿ ಅಧಿಕ: ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ವರದಿಯಾಗಿವೆ. 2018, 2019 ಮತ್ತು 2020ರಲ್ಲಿ ಈ ಐದು ರಾಜ್ಯಗಳು ಆತ್ಮಹತ್ಯೆ ಪಟ್ಟಿಯಲ್ಲಿ ಟಾಪ್ 5ರ ಸ್ಥಾನದಲ್ಲಿವೆ. ದೇಶಾದ್ಯಂತ ವರದಿಯಾಗುವ ಒಟ್ಟಾರೆ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.50 ಕೇಸ್​ಗಳು ಈ ಐದು ರಾಜ್ಯಗಳಲ್ಲಿ ವರದಿಯಾಗಿವೆ. ಶೇ.13 ಆತ್ಮಹತ್ಯೆ ಪ್ರಕರಣ ಮಹಾರಾಷ್ಟ್ರದಲ್ಲಿ ವರದಿಯಾಗುತ್ತಿವೆ. ಕರ್ನಾಟಕದಲ್ಲಿ ಶೇ.8 ಕೇಸ್ ವರದಿಯಾಗುತ್ತಿವೆ.

ನೇಣಿಗೇರುವವರೇ ಹೆಚ್ಚು: 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವವರಲ್ಲಿ ಶೇ.57.8 ಮಂದಿ ನೇಣಿಗೆ ಕೊರಳೊಡಿದ್ದಾರೆ. ಶೇ.25.8 ಜನ ಕ್ರಿಮಿನಾಶಕ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಗುಂಡು ಹಾರಿಸಿಕೊಂಡು ಶೇ.3.8, ನೀರಿನಲ್ಲಿ ಮುಳುಗಿ ಶೇ.5.2, ಕಟ್ಟಡದಿಂದ ಜಿಗಿದು ಶೇ.1.5 ಹಾಗೂ ಚಲಿಸುವ ವಾಹನಗಳಿಗೆ ಬಿದ್ದು ಶೇ.2.4 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜ್ಯದ ನಶೆ ಹೆಜ್ಜೆ

  • ಕರ್ನಾಟಕದಲ್ಲಿ ವಾರ್ಷಿಕ ಸರಾಸರಿ 1100 ಕೇಸ್ ಎನ್​ಡಿಪಿಎಸ್ ಕಾಯ್ದೆಯಡಿ ದಾಖಲು
  • ಸ್ಯಾಂಡಲ್​ವುಡ್ ಡ್ರಗ್ಸ್ ಕೇಸ್ ಹೊರಬಂದ ಬಳಿಕ ಕಾರ್ಯಾಚರಣೆ ಚುರುಕುಗೊಳಿಸಿದ್ದ ಸಿಸಿಬಿ
  • ಆನ್​ಲೈನ್ ಫಾರ್ಮಸಿ ಮತ್ತು ಕೊರಿಯರ್ ಸೇವೆ ದುರ್ಬಳಕೆ ಮಾಡಿಕೊಂಡು ಡ್ರಗ್ಸ್ ಸಾಗಾಟ
  • ಮಾದಕ ಪದಾರ್ಥ ಪೂರೈಕೆ/ಮಾರಾಟಕ್ಕೆ ಬಿಟ್ ಕಾಯಿನ್ ಬಳಕೆ. ವಿದೇಶಿಗರ ಸಂಖ್ಯೆ ಹೆಚ್ಚು

ಆತ್ಮಹತ್ಯೆ ತಡೆಗೆ ಸರ್ಕಾರದ ಕ್ರಮ

  • ಕರ್ನಾಟಕದ್ದೂ ಸೇರಿ ದೇಶದ 272 ಜಿಲ್ಲೆಗಳಲ್ಲಿ ನಶೆಮುಕ್ತ ಭಾರತ ಅಭಿಯಾನ
  • 8000 ಸ್ವಯಂಸೇವಕರಿಂದ 42 ಲಕ್ಷ ಯುವಕರಿಗೆ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಲಾಗಿದೆ
  • ಡ್ರಗ್ಸ್ ವ್ಯಸನಿಗಳ ಕೌನ್ಸೆಲಿಂಗ್​ಗೆ 380 ಸಂಯೋಜಿತ ಪುನರ್ವಸತಿ (ಐಆರ್​ಸಿಎ) ಕೇಂದ್ರ ಸ್ಥಾಪನೆ
  • ಡ್ರಗ್ಸ್ ಚಟಕ್ಕೆ ಬಿದ್ದ ಮಕ್ಕಳು ಹಾಗೂ ಹದಿಹರೆಯದವರ ಮೇಲೆ ನಿಗಾ ಇಡಲು 80 ಕೇಂದ್ರ
  • 2020 ಹಾಗೂ 2021ರಲ್ಲಿ ಶಾಲಾ-ಕಾಲೇಜುಗಳಲ್ಲಿ 10,195 ಡ್ರಗ್ಸ್ ಜಾಗೃತಿ ಕಾರ್ಯಕ್ರಮ
  • ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳ ಮೂಲಕ ಡ್ರಗ್ಸ್ ಜಾಗೃತಿ ವಿಡಿಯೋಗಳು

ಡ್ರಗ್ಸ್/ಮದ್ಯ ಸೇವನೆಯಿಂದ ದೈಹಿಕ ಆರೋಗ್ಯದ ಜತೆ ಮಾನಸಿಕ ಆರೋಗ್ಯವೂ ಕೆಡುತ್ತದೆ. ಮಿದುಳಿನ ಪ್ರಕ್ರಿಯೆ ಕುಂಠಿತವಾಗುತ್ತಾ ಹೋಗುತ್ತದೆ. ಸರಿ-ತಪ್ಪು ನಿರ್ಧಾರ ತೆಗೆದುಕೊಳ್ಳುವ ವಿವೇಚನೆಯನ್ನೇ ಕಳೆದುಕೊಂಡು ಬದುಕಿಗಿಂತ ಸಾವೇ ಸೂಕ್ತ ಎನಿಸಿ ವ್ಯಸನಿ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ.

| ಡಾ.ಶಶಿಧರ್ ಮನೋವೈದ್ಯರು ಹಾಗೂ ನಿವಾಸಿ ವೈದ್ಯಾಧಿಕಾರಿ, ನಿಮ್ಹಾನ್ಸ್

ಹದಿಹರೆಯದವರೇ ಹೆಚ್ಚು: ಹುಟ್ಟಿದ 2 ವರ್ಷ ಹಾಗೂ 13 ರಿಂದ 20ನೇ ವರ್ಷದಲ್ಲಿ ಮಿದುಳು ರೂಪುಗೊಳ್ಳುತ್ತದೆ. ಆದ್ದರಿಂದ ಹದಿಹರೆಯದ ಯುವಕರೇ ಹೆಚ್ಚು ಮಾದಕ ಹಾಗೂ ಮದ್ಯಪಾನ ವ್ಯಸನಿಗಳಾಗುತ್ತಾರೆ. ಸ್ನೇಹಿತರ ಸಹವಾಸ ಹಾಗೂ ಸುತ್ತಮುತ್ತಲಿನ ವ್ಯಕ್ತಿಗಳಿಂದ ಡ್ರಗ್ಸ್ ಅಥವಾ ಮದ್ಯದ ಚಟ ಅಂಟಿಸಿಕೊಳ್ಳುತ್ತಾರೆ. ರೋಲ್ ಮಾಡೆಲ್​ಗಳಿಂದಲೂ ವ್ಯಸನಕ್ಕೆ ತುತ್ತಾಗುತ್ತಾರೆ. ರೋಲ್ ಮಾಡೆಲ್ ಆದವರು ಏನು ಮಾಡುತ್ತಾರೋ ಅದೆಲ್ಲವನ್ನು ಇವರೂ ಅನುಕರಿಸುತ್ತಾರೆ ಎನ್ನುತ್ತಾರೆ ಮನೋವೈದ್ಯ ಡಾ.ಶಶಿಧರ್.

ವೈದ್ಯರ ಸಲಹೆ ಏನು?

  • ಮಾತ್ರೆ ಮತ್ತು ಕೌನ್ಸೆಲಿಂಗ್ ಮೂಲಕ ಮನುಷ್ಯನ ಚಟಗಳನ್ನು ಬಿಡಿಸಲು ಸಾಧ್ಯ
  • ವ್ಯಸನಮುಕ್ತಗೊಳಿಸುವುದು ಮ್ಯಾಜಿಕ್ ಅಲ್ಲ. ಅದಕ್ಕೆ ನಿರಂತರ ಚಿಕಿತ್ಸೆ ಕೊಡಬೇಕು
  • 20 ದಿನ ಚಿಕಿತ್ಸೆ ಕೊಟ್ಟರೆ 3 ತಿಂಗಳವರೆಗೆ ಚಟ ಬಿಟ್ಟು ಮತ್ತೆ ಆರಂಭಿಸುತ್ತಾರೆ, ನಿರಂತರವಾಗಿ ಚಿಕಿತ್ಸೆ ಮುಂದುವರಿಸಿದರೆ ಶಾಶ್ವತವಾಗಿ ವ್ಯಸನ ಬಿಡಿಸಬಹುದು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net