

ನಾಪೋಕ್ಲು : ಪ್ರಪಂಚದ ಐದು ಭೀಕರವಾದ ಕಾಯಿಲೆಗಳಲ್ಲಿ ಮಾದಕ ವ್ಯಸನವೂ ಒಂದು ಎಂದು ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಶಿಬಿರಾಧಿಕಾರಿ ಪಿ.ಪಿ.ನಂದಕುಮಾರ್ ಹೇಳಿದರು.
ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್, ಬೆಟ್ಟಗೇರಿ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಾಕತ್ತೂರು ಸರ್ಕಾರಿ ಪ್ರೌಢಶಾಲೆ , ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದುವರೆಗೆ ಕರ್ನಾಟಕ ರಾಜ್ಯದ 19,448 ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮ ನಡೆಸಿ 21ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಇದುವರೆಗೆ 1906 ಮದ್ಯವರ್ಜನ ಶಿಬಿರಗಳನ್ನು ನಡೆಸಿ 15ಲಕ್ಷ ಮದ್ಯವ್ಯಸನಿಗಳನ್ನು ವ್ಯಸನಮುಕ್ತಗೊಳಿಸಲಾಗಿದೆ ಎಂದರು.
ಮಾದಕ ವ್ಯಸನವೆಂಬುದೊಂದು ರೋಗ. ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನೆಯ ಪ್ರಕಾರ ಭಾರತ ದೇಶದಲ್ಲಿ ಒಂದು ವರ್ಷಕ್ಕೆ 5 ಲಕ್ಷ ಜನ ಮದ್ಯಪಾನದಿಂದ ಮರಣ ಹೊಂದಿದರೆ, 14.5 ಲಕ್ಷ ಜನ ಮಾದಕ ದ್ರವ್ಯ, ಮಾದಕ ವ್ಯಸನ ಅಥವಾ ಇನ್ನಿತರ ಚಟಗಳಿಂದ ಬಲಿಯಾಗುತ್ತಿರುವುದು ಶೋಚನೀಯ. ಪ್ರಪಂಚದ ಐದು ಭೀಕರ ಕಾಯಿಲೆಗಳಲ್ಲಿ ಮಾದಕ ವ್ಯಸನವೂ ಒಂದು. ಹದಿಹರೆಯದಲ್ಲಿನ ಒತ್ತಡ, ಪಾಲಕರ ಒತ್ತಡ, ಸ್ನೇಹಿತರು, ಜೀವನ ಶೈಲಿ, ಮಾಧ್ಯಮ, ಆರ್ಥಿಕ ಸ್ವಾತಂತ್ರ್ಯ, ಪ್ರೀತಿ, ಅನಾರೋಗ್ಯ, ಪಾಶ್ಚಾತ್ಯ ಸಂಸ್ಕೃತಿ, ಸಾಹಸ ಪ್ರವೃತ್ತಿ, ನಕಾರಾತ್ಮಕ ಚಿಂತನೆಗಳಿಂದ ವ್ಯಸನಗಳಿಗೆ ಬಲಿಯಾಗುವ ಸಾಧ್ಯತೆಗಳಿವೆ. ಸಪ್ತ ವ್ಯಸನಗಳಲ್ಲಿ ಮಾದಕ ವ್ಯಸನ ಮೊದಲ ಮೆಟ್ಟಿಲು. ಈ ಮೆಟ್ಟಿಲನ್ನು ಜಾರಿದರೆ ಉಳಿದೆಲ್ಲ ಮೆಟ್ಟಿಲುಗಳು ತನ್ನಿಷ್ಟಕ್ಕೆ ಜಾರುತ್ತವೆ. ಅತಿಯಾದ ಮೊಬೈಲ್ ಬಳಕೆ ಮತ್ತು ಸಾಮಾಜಿಕ ಜಾಲತಾಣದಿಂದಲೂ ವಿದ್ಯಾರ್ಥಿಗಳ ಮನಸ್ಥಿತಿ ಹಾಳಾಗುತ್ತದೆ. ವಿದ್ಯಾರ್ಥಿಗಳು ಇದರ ಬಗ್ಗೆಯೂ ಗಮನಹರಿಸಬೇಕು ಎಂದರು.
ಹಾಕತ್ತೂರು ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ವನಜಾ ಮಾತನಾಡಿ, ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳ ಮನಸ್ಸು ತುಂಬ ಚಂಚಲ. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಸ್ವನಿಗ್ರಹದೊಂದಿಗೆ ಹತೋಟಿಗೆ ತಂದುಕೊಳ್ಳುವ ಅನಿವಾರ್ಯತೆ ಇದೆ. ನಮ್ಮ ಶಾಲೆಯಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ನಡೆಸಲು ಅನುಮತಿ ನೀಡಿದ ಯೋಜನೆ ಕಾರ್ಯ ಶ್ಲಾಘನೀಯ. ಶಾಲೆಯ ಆವರಣ ಅಭಿವೃದ್ಧಿಗಾಗಿ ಧರ್ಮಸ್ಥಳಯೋಜನೆಯಿಂದ 1 ಲಕ್ಷ ರೂ. ಮೊತ್ತದ ಅನುದಾನ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಶಿಕ್ಷಕರಾದ ಮೀನಾ, ಜಯಂತಿ, ಒಕ್ಕೂಟದ ಅಧ್ಯಕ್ಷರಾದ ಪಾರ್ವತಿ, ಒಕ್ಕೂಟದ ಕಾರ್ಯದರ್ಶಿ ಹರಿಣಿ, ಮೇಲ್ವಿಚಾರಕಿ ಬಿ.ಎಚ್.ವಿದ್ಯಾ, ಸೇವಾ ಪ್ರತಿನಿಧಿ ಕವಿತಾ, ಹರಿಣಿ ಇದ್ದರು.