

ಬೆಂಗಳೂರು: ಸಾಲ ವಸೂಲಾತಿ ನ್ಯಾಯಮಂಡಳಿಗೆ (ಡಿಆರ್‌ಟಿ) ನಾಗರಿಕರಿಂದ ಪಾಸ್‌ಪೋರ್ಟ್‌ನ್ನು ವಶಕ್ಕೆ ಪಡೆದುಕೊಳ್ಳುವ ಅಧಿಕಾರವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ವಶಕ್ಕೆ ಪಡೆದಿದ್ದ ಪಾಸ್‌ಪೋರ್ಟ್ ಹಿಂದಿರುಗಿಸಲು ನಿರಾಕರಿಸಿದ್ದ ಡಿಆರ್‌ಟಿ ಕ್ರಮ ಪ್ರಶ್ನಿಸಿ ಮುಂಬೈ ಮೂಲದ ಶಂಭು ಕುಮಾರ್ ಕಸ್ಲಿವಾಲ್ ಎಂಬುವರು ಹೈಕೋರ್ಟಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ೨೦೧೬ರಲ್ಲಿ ವಶಕ್ಕೆ ಪಡೆದಿರುವ ಪಾಸ್‌ಪೋರ್ಟ್‌ನ್ನು ಹಿಂದಿರುಗಿಸುವಂತೆ ಸೂಚನೆ ನೀಡಿದೆ.
ಡಿಆರ್‌ಟಿಯು ಸಿವಿಲ್ ನ್ಯಾಯಾಲಯದಂತೆ ಕಾರ್ಯನಿರ್ವಹಿಸಲಿದೆ. ಈ ನ್ಯಾಯಾಲಯಕ್ಕೆ ಪಾಸ್‌ಪೋರ್ಟ್‌ನನ್ನು ತನ್ನ ವಶದಲ್ಲಿಟ್ಟುಕೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.
ನಂದಾ ವಿರುದ್ಧದ ಸಿಬಿಐ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿರುವ ನ್ಯಾಯಪೀಠ, ಸಿಆರ್‌ಪಿಸಿ ೧೦೨ ಅಥವಾ ೧೦೪ರ ಅಡಿಯಲ್ಲಿ ಕ್ರಿಮಿನಲ್ ನ್ಯಾಯಾಲಯಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೂ ಪಾಸ್‌ಪೋರ್ಟ್ ಅನ್ನು ವಶಕ್ಕೆ ಪಡೆಯುವುದಕ್ಕೆ ಯಾವುದೇ ಅಧಿಕಾರವಿಲ್ಲ. ಅದೇ ರೀತಿಯಲ್ಲಿ ಡಿಆರ್‌ಟಿಗೂ ಅಧಿಕಾರವಿಲ್ಲ ಎಂದು ಪೀಠ ತಿಳಿಸಿದೆ.
ಅಗತ್ಯವಿದ್ದಲಿ ್ಲಅರ್ಜಿದಾರರ ಪಾಸ್‌ಪೋರ್ಟ್ ಅನ್ನು ಪಾಸ್‌ಪೋರ್ಟ್ ಕಾಯಿದೆ ಸೆಕ್ಷನ್ ೧೦ರ ಅಡಿಯಲ್ಲಿ ವಶಪಡಿಸಿಕೊಳ್ಳವುದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸ್ವಾತಂತ್ರ್ಯವಿರಲಿದೆ ಎಂದು ಪೀಠ ತಿಳಿಸಿದೆ.
ಏನಿದು ಪ್ರಕರಣ?
೧೯೯೯ರ ನ.೧೮ರಂದು ಅರ್ಜಿದಾರರು ಸಾಲಗಾರರಿಂದ ಪಡೆದ ಸಾಲಕ್ಕೆ ಕೆಲವು ಭದ್ರತಾ ಒಪ್ಪಂದ ಮಾಡಿಕೊಂಡಿದ್ದರು. ೨೦೧೫ರ ಮಾ. ೨೦ ರಂದು ಕಂಪನಿಗಳು ಸಾಲ ಮರು ಪಾವತಿ ಮಾಡುವಂತೆ ಮಾಡುವ ಸಂಬಂಧ ಕ್ರಮಕ್ಕೆ ಮುಂದಾಗಿದ್ದರು. ಅದರಂತೆ ಅರ್ಜಿದಾರರ ಆಸ್ತಿಗಳನ್ನು ಮಾರಾಟ ಮಾಡಲಾಗಿತ್ತು. ಇದಾದ ಬಳಿಕ ಸಾಲದಾತರು, ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಕಾಯಿದೆ ೧೯೯೩ರ ಅಡಿಯಲ್ಲಿ ಡಿಆರ್‌ಟಿಗೆ ಅರ್ಜಿ ಸಲ್ಲಿಸಿ ಪಾಸ್‌ಪೋರ್ಟ್‌ನ್ನು ವಶಕ್ಕೆ ಪಡೆಯುವುದು ಮತ್ತು ದೇಶ ಬಿಟ್ಟುಹೋಗದಂತೆ ನಿರ್ಬಂಧ ಹೇರುವಂತೆ ಕೋರಿದ್ದರು. ಈ ಅರ್ಜಿಯನ್ನು ೨೦೧೫ರ ಏ. ೧೬ ರಂದು ಡಿಆರ್‌ಟಿ ಪುರಸ್ಕರಿಸಿತ್ತು. ಅಲ್ಲದೆ, ಅರ್ಜಿದಾರರು ವಿದೇಶ ಪ್ರಯಾಣ ಮಾಡುವ ಸಂದರ್ಭದಲ್ಲಿ ಅಗತ್ಯವಿರುವ ಪ್ರವಾಸ ದಾಖಲೆಗಳನ್ನು ನೀಡಿ ಪಾಸ್‌ಪೋರ್ಟ್ ಪಡೆದುಕೊಳ್ಳಬಹುದು ಎಂದು ಡಿಆರ್‌ಟಿ ಆದೇಶಿಸಿತ್ತು. ಆದರೂ, ಈ ಆದೇಶ ಜಾರಿಯಾಗಿರಲಿಲ್ಲ. ಈ ಆದೇಶದಂತೆ ಅರ್ಜಿಯ ಸಂಬಂಧ ಅರ್ಜಿದಾರರು ೨೦೧೬ರ ಏಪ್ರಿಲ್ ೫ರಂದು ತನ್ನ ಪಾಸ್‌ಪೋರ್ಟ್‌ನ್ನು ಡಿಆರ್‌ಟಿ ವಶಕ್ಕೆ ನೀಡಿದ್ದರು. ೨೦೧೬ರ ಡಿ. ೨ ರಂದು ಡಿಆರ್‌ಟಿಗೆ ಅರ್ಜಿ ಸಲ್ಲಿಸಿದ್ದ ಕಸ್ಲಿವಾಲ, ಪಾಸ್‌ಪೋರ್ಟ್ ಬಿಡುಗಡೆ ಮನವಿ ಮಾಡಿದ್ದರು. ಈ ಅರ್ಜಿಯನ್ನು ಡಿಆರ್‌ಟಿ ಪರಿಗಣಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.