

ನವೀನ್ ಬಿಲ್ಗುಣಿ ಶಿವಮೊಗ್ಗ
ಪ್ರಸಕ್ತ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ರಾಜ್ಯಾದ್ಯಂತ ಅಂತರ್ಜಲಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಪರಿಣಾಮ 200ಕ್ಕೂ ಅಧಿಕ ತಾಲೂಕುಗಳ ಸಾವಿರಾರು ಕೊಳವೆಬಾವಿಗಳು ವರ್ಷಾರಂಭದಲ್ಲೇ ಬತ್ತಲಾರಂಭಿಸಿವೆ. ಬರದ ನಡುವೆ ಅಂತರ್ಜಲ ಮಟ್ಟ ಕುಸಿತವೂ ಅನ್ನದಾತನನ್ನು ಮತ್ತಷ್ಟು ಆತಂಕಕ್ಕೆ ದೂಡಿದ್ದು, ಕರುನಾಡಿಗೆ ಅಂತರ್ಜಲ ಆಘಾತ ಎದುರಾಗಿದೆ. ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ಶೇ.18 ಮುಂಗಾರು ಮತ್ತು ಶೇ.36 ಹಿಂಗಾರು ಮಳೆ ಕೊರತೆಯಾಗಿದೆ. 2023ರ ಅಂತ್ಯಕ್ಕೂ ಮುನ್ನವೇ ಕೆರೆ ಕಟ್ಟೆಗಳು, ನದಿ, ಹಳ್ಳ-ಕೊಳ್ಳಗಳೆಲ್ಲ ನೀರಿಲ್ಲದೆ ಬರಿದಾಗಿದ್ದವು. ಇದು ಸಹಜವಾಗಿಯೇ ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ. ರಾಜ್ಯದ 236 ತಾಲೂಕುಗಳ ಪೈಕಿ ಈಗಾಗಲೇ 215ಕ್ಕೂ ತಾಲೂಕುಗಳಲ್ಲಿ ಅಂತರ್ಜಲ ಪಾತಾಳ ಕಂಡಿರುವುದು ಆಘಾತಕಾರಿಯಾಗಿದೆ.
ಮುಂಗಾರು ಕೈಕೊಟ್ಟಿದ್ದರಿಂದ ರೈತರು ಮಳೆಗಾಲದಲ್ಲೂ ಬೋರ್ವೆಲ್ಗಳನ್ನೇ ಆಶ್ರಯಿಸುವಂತಾಯಿತು. ಮಲೆನಾಡು ಜಿಲ್ಲೆಗಳ ಸಹಿತ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೂ ಈ ಬಾರಿ ಭತ್ತ ಬೆಳೆಯುವುದಕ್ಕೂ ಬೋರ್ವೆಲ್ಗಳನ್ನೇ ಆಶ್ರಯಿಸುವಂತಾಯಿತು. ಬಳಿಕ ಹಿಂಗಾರು ಮಳೆ ಶೇ.36 ಕೊರತೆ ಆಗಿದ್ದು, ಗಾಯದ ಮೇಲೆ ಬರೆ ಎಳೆದಿದೆ. ಬೋರ್ವೆಲ್ಗಳು ತ್ರೀಫೇಸ್ ಪವರ್ ಇದ್ದಷ್ಟು ಸಮಯ ನೀರೆತ್ತುವ ಕೆಲಸ ಮಾಡಿದ್ದು ಇದೀಗ ಬೇಸಿಗೆ ಆರಂಭಗೊಳ್ಳುವ ಹೊತ್ತಿಗೆ ಕೈಕೊಡಲಾರಂಭಿಸಿವೆ.
ರಾಜ್ಯ ಅಂತರ್ಜಲ ನಿರ್ದೇಶನಾಲಯವು 236 ತಾಲೂಕುಗಳಲ್ಲಿ 1,764 ಅಧ್ಯಯನ ಕೊಳವೆ ಬಾವಿಗಳನ್ನು (ಕೇಂದ್ರ) ಹೊಂದಿದ್ದು ಅವುಗಳ ಮೂಲಕ ಪ್ರತಿ ತಿಂಗಳೂ ಅಂತರ್ಜಲ ಮಟ್ಟವನ್ನು ದಾಖಲಿಸುತ್ತಿವೆ. ಈ ಎಲ್ಲ ಕೊಳವೆ ಬಾವಿಗಳ ಸರಾಸರಿ ಲೆಕ್ಕ ಆಘಾತವನ್ನುಂಟು ಮಾಡುತ್ತಿದೆ. ಕೆಎಸ್ಎನ್ಡಿಎಂಸಿ (ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ) ಈ ವರದಿಯನ್ನು ತಯಾರಿಸಿದೆ.
1000 ಅಡಿ ಆಳ ಕೊರೆಸಿದ್ರೂ ನೀರಿಲ್ಲ: ಕೆಲವು ತಿಂಗಳ ಹಿಂದೆ 400ರಿಂದ 500 ಅಡಿ ಆಳದವರೆಗೆ ಕೊರೆಸಿದರೆ 3ರಿಂದ 4 ಇಂಚಿನವರೆಗೂ ಬೋರ್ವೆಲ್ಗಳಲ್ಲಿ ನೀರು ಸಿಗುತ್ತಿತ್ತು. ಆದರೆ ಸದ್ಯ ಚಿತ್ರಣ ಸಂಪೂರ್ಣ ಬದಲಾಗಿದೆ. 700ರಿಂದ ಒಂದು ಸಾವಿರ ಅಡಿವರೆಗೆ ಬೋರ್ವೆಲ್ ಕೊರೆಸಿದರೂ ಒಂದು ಹನಿ ನೀರು ಸಿಗುತ್ತಿಲ್ಲ. ಒಂದೂವರೆ, ಎರಡು ಇಂಚು ನೀರು ಬಿದ್ದರೂ ಪಂಪ್ಸೆಟ್, ಟ್ರಾನ್ಸ್ಫಾರ್ಮರ್(ಟಿಸಿ) ಸೇರಿ ಲಕ್ಷಾಂತರ ರೂ. ಖರ್ಚು ಮಾಡಬೇಕಾಗಿದೆ. ಪರ್ಯಾಯ ಮಾರ್ಗಗಳಿಲ್ಲದೆ ರೈತರು ಲಕ್ಷಾಂತರ ರೂ. ಖರ್ಚು ಮಾಡಿ ಕೈ ಸುಟ್ಟುಕೊಳ್ಳುವಂತಾಗಿದೆ.
ಬೇಕಿದೆ ಅನುಮತಿ: ಅಂತರ್ಜಲ ಮಟ್ಟ ಕುಸಿತದ ಬೆನ್ನಲ್ಲೇ ರಾಜ್ಯ ಅಂತರ್ಜಲ ನಿರ್ದೇಶನಾಲಯವು ಬೋರ್ವೆಲ್ಗಳನ್ನು ಕೊರೆಸುವುದಕ್ಕೂ ಅನುಮತಿ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಕೆಎಸ್ಎನ್ಡಿಎಂಸಿ ವರದಿ ಪ್ರಕಾರ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿರುವ ಜಿಲ್ಲೆಗಳಲ್ಲಿ ಬೋರ್ವೆಲ್ ಕೊರೆಸುವುದಕ್ಕೆ ಜಿಲ್ಲಾಧಿಕಾರಿಗಳ ಅನುಮತಿಯನ್ನು ಪಡೆಯುವಂತೆ ಸೂಚಿಸಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಕಮಿಟಿಯು ಆಯಾ ಜಿಲ್ಲೆಗಳಲ್ಲಿ ಅಂತರ್ಜಲ ಪ್ರಮಾಣ ಎಷ್ಟಿದೆ ಎಂಬುದನ್ನು ಪರಿಶೀಲಿಸಿ ಅನುಮತಿ ನೀಡಿದೆ. ಶಿವಮೊಗ್ಗ ಸೇರಿ ಪಶ್ಚಿಮಘಟ್ಟಗಳ ಜಿಲ್ಲೆಗಳಲ್ಲಿ ಅನುಮತಿ ಪಡೆಯುವುದು ಕಡ್ಡಾಯವಲ್ಲ ಎಂಬುದು ಕೆಲ ರೈತರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಕೆರೆ-ನದಿ ಬರಿದು: ಬೆಳೆ ಉಳಿಸಿಕೊಳ್ಳಲು ಸಮೀಪದ ಕೆರೆ ಅಥವಾ ಹಳ್ಳ-ಕೊಳ್ಳಗಳಿಂದ ನೀರು ಹಾಯಿಸುವುದು ಕೂಡ ಈಗ ಕಷ್ಟದಾಯಕವಾಗಿದೆ. ಕಳೆದ ಮಳೆಗಾಲದಲ್ಲಿ ಜಿಲ್ಲೆಯ ಸಾಕಷ್ಟು ಕೆರೆಗಳು ಭರ್ತಿ ಆಗಿರಲಿಲ್ಲ. ಮಧ್ಯದಲ್ಲಿ ಮಳೆ ಕೈಕೊಟ್ಟಿದ್ದರಿಂದ ರೈತರು ಕೆರೆ ನೀರನ್ನು ಬಿಟ್ಟುಕೊಂಡು ಮಳೆ ಆಶ್ರಿತ ಬೆಳೆ ಬೆಳೆದಿದ್ದಾರೆ. ಇದರಿಂದ ಡಿಸೆಂಬರ್ ಅಂತ್ಯಕ್ಕೆ ಕೆರೆಗಳಲ್ಲಿ ಅರ್ಧ ಪ್ರಮಾಣದ ನೀರು ಮಾತ್ರ ಉಳಿದಿದೆ. ಬೇಸಿಗೆಗೆ ಜಾನುವಾರುಗಳು ಕುಡಿಯಲಿಕ್ಕೆ ನೀರು ಮೀಸಲಿಡಬೇಕಾದ ಸ್ಥಿತಿ ಇದೆ. ಹಳ್ಳ-ಕೊಳ್ಳಗಳಲ್ಲಿಯೂ ಅಲ್ಲಲ್ಲಿ ಅಲ್ಪ ಪ್ರಮಾಣದ ನೀರು ಮಾತ್ರ ಗೋಚರಿಸುತ್ತಿದೆ. ಇದನ್ನು ಬಳಸಲು ಆಗುವುದಿಲ್ಲ. ಮೇ ಅಂತ್ಯದವರೆಗೆ ಬೇಸಿಗೆ ಕಾಲವಿದ್ದು ವಾತಾವರಣದ ತಾಪಮಾನ ಏರಿಕೆಯಾದರೆ ಇರುವ ಬೆಳೆ ಪೂರ್ಣ ನಾಶವಾಗಲಿದೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.
ಕುಡಿಯಲು ನೀರು ಸಿಗದು: 2024ರ ಏಪ್ರಿಲ್ ವೇಳೆಯಲ್ಲಿ ಬಿಸಿಲು ಮಳೆ, ಮುಂಗಾರು ಪೂರ್ವ, ತರುವಾಯ ಮುಂಗಾರು ಮಳೆಯಾಗದಿದ್ದರೆ, ಭೀಕರ ಕ್ಷಾಮ ಉಂಟಾಗಲಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರು ಸಿಗದ ಪರಿಸ್ಥಿತಿ ನಿರ್ವಣವಾಗಲಿದೆ. ನೀರಿಗಾಗಿ ಅಲೆದಾಡುವ, ಗುಳೆ ಹೋಗುವ ವಾತಾವರಣ ಕೆಲ ಜಿಲ್ಲೆಗಳಲ್ಲಿ ಸೃಷ್ಟಿಯಾಗಲಿದೆ ಎಂಬುದು ಅಂತರ್ಜಲ ತಜ್ಞರ ಆತಂಕ.
ಐದು ತಿಂಗಳಲ್ಲಿ ಮತ್ತಷ್ಟು ಗಂಭೀರ ಸ್ಥಿತಿ: ಮುಂದಿನ 4 ತಿಂಗಳು ಬಿಸಿಲಿನ ತಾಪ ಹೆಚ್ಚಾಗಲಿದೆ ಎಂಬ ವರದಿ ಬೆನ್ನಲ್ಲೇ ಅಂತರ್ಜಲ ಮಟ್ಟವನ್ನು ಮತ್ತಷ್ಟು ಕುಸಿಯದಂತೆ ತಡೆಯುವ ಸವಾಲು ರಾಜ್ಯದ ಮುಂದಿದೆ. ಈಗಾಗಲೇ ರಾಜ್ಯದ ಬಹಳಷ್ಟು ಜಿಲ್ಲೆಗಳಲ್ಲಿ ಅಂತರ್ಜಲ 8 ರಿಂದ 13 ಅಡಿಯಷ್ಟು ಕುಸಿತ ಕಂಡಿದೆ. 2022ಕ್ಕೆ ಹೋಲಿಸಿದರೆ 2023ರಲ್ಲಿ ಅಂತರ್ಜಲ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಹಾಗಾಗಿ ಬೇಸಿಗೆಯಲ್ಲಿ ಅದು ಮತ್ತಷ್ಟು ಕುಸಿಯುವ ಆತಂಕ ವ್ಯಕ್ತವಾಗಿದೆ. ಈ ಐದು ತಿಂಗಳಲ್ಲಿ ಬೋರ್ವೆಲ್ಗಳು ಮತ್ತಷ್ಟು ಬರಿದಾಗಲಿದ್ದು ಅನ್ನದಾತರ ಸ್ಥಿತಿ ಮತ್ತಷ್ಟು ಸಂಕಷ್ಟಕ್ಕೀಡಾಗುವುದು ನಿಶ್ಚಿತವೆನಿಸಿದೆ.
ಅಂತರ್ಜಲ ಕುಸಿಯುತ್ತಿದ್ದು ಬೋರ್ವೆಲ್ಗಳಲ್ಲಿ ನೀರು ಕಡಿಮೆ ಆಗುತ್ತಿದೆ. ಕೊಳವೆಬಾವಿಗಳಲ್ಲಿ ಒಂದೆರಡು ಗಂಟೆಗೇ ನೀರು ಖಾಲಿ ಆಗುತ್ತಿವೆ. ಇದು ರೈತರನ್ನು ಚಿಂತೆಗೆ ದೂಡಿದೆ. ಬೇಸಿಗೆ ಇನ್ನೂ ಕೆಲ ತಿಂಗಳು ಇರುವ ಕಾರಣ ಮುಂದಿನ ದಿನಗಳಲ್ಲಿ ಬೋರ್ವೆಲ್ಗಳ ಮೋಟರ್ ಉಳಿಸಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಲಿದೆ.
| ನಾಗರಾಜಪ್ಪ ರೈತ ರಾಮೇಶ್ವರ
ಬೋರ್ವೆಲ್ಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. 700 ಅಡಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಮಳೆ ಕೊರತೆಯಿಂದ ಕೆರೆಕಟ್ಟೆಗಳು ಬರಿದಾಗಿವೆ. ಹಾಗಾಗಿ ಅಂತರ್ಜಲ ಮಟ್ಟ ಕಡಿಮೆ ಆಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಬೋರ್ವೆಲ್ ಕೊರೆಸುವುದಕ್ಕೂ ಅನುಮತಿ ಪಡೆದುಕೊಳ್ಳಬೇಕಿದೆ.
| ನಿರ್ಮಲಾ ಹಿರಿಯ ಭೂವಿಜ್ಞಾನಿ, ಶಿವಮೊಗ್ಗ