

ಮಂಡ್ಯ: ರೇಷ್ಮೆ ಬೆಳೆಗಾರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗೂ ರೇಷ್ಮೆ ಬೆಳೆಗಾರರ ಒಕ್ಕೂಟದ ಜಿಲ್ಲಾದ್ಯಂತ ಮೇ.5ರಿಂದ 15ರವರೆಗೆ ಎಲ್ಲ ತಾಲೂಕಿನಲ್ಲಿ ಬರ ಅಧ್ಯಯನ ಮಾಡಲಾಗುತ್ತಿದೆ ಎಂದು ಟ್ರಸ್ಟ್ ಮತ್ತು ಒಕ್ಕೂಟದ ಸಂಚಾಲಕ ಜೋಗಿಗೌಡ ಹೇಳಿದರು.
ಆಯಾ ತಾಲೂಕಿನ ರೈತರೊಂದಿಗೆ ಚರ್ಚಿಸಿ, ಸಮಸ್ಯೆಗಳನ್ನು ಆಲಿಸಿ ಬಳಿಕ ವರದಿಯನ್ನು ಜಿಲ್ಲಾಧಿಕಾರಿ ಮುಖಾಂತರ ರಾಜ್ಯಸರ್ಕಾರಕ್ಕೆ ತರಲಾಗುವುದು. ಪ್ರಸ್ತುತ ತೀವ್ರ ಬರಗಾಲಕ್ಕೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಆ ಬೆಳೆಯ ಆದ್ಯತೆಯ ಮೇಲೆ ಕನಿಷ್ಟ ಎಕರೆಗೆ 25 ಸಾವಿರ ರೂ ಪರಿಹಾರವನ್ನು ಘೋಷಿಸಿ ತಕ್ಷಣ ರೈತರ ಪರ ಸರ್ಕಾರ ನಿಲ್ಲಬೇಕು. ಇಂತಹ ಬರವನ್ನು ನಾವು ಎಂದೂ ನೋಡಿರಲಿಲ್ಲ. ಅಂತರ್ಜಲ ತಕ್ಷಣ ಕುಸಿತದಿಂದ ಬೋರ್‌ವೆಲ್ ನಿಂತಿರುವುದು ಆಘಾತಕಾರಿ ವಿಷಯ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಕ್ಕೂಟದ ಅಧ್ಯಕ್ಷ ಶಿವಲಿಂಗಯ್ಯ ಮಾತನಾಡಿ, ಬೆಲೆ ಕುಸಿತ ಹಾಗೂ ರೇಷ್ಮೆ ಬೆಳೆಗೆ ಹೆಚ್ಚು ಕೀಟ ಬಾಧೆ ಮತ್ತು ಮಳೆ ಕೊರತೆ ಹಿನ್ನೆಲೆ ಹಿಪ್ಪುನೇರಳೆ ಬೆಳೆಯು ಸಂಪೂರ್ಣ ನೆಲ ಕಚ್ಚಿದೆ. ಆದ್ದರಿಂದ ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ಈ ಬಗ್ಗೆ ಅಧ್ಯಯನ ಮಾಡಿ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ವರದಿ ಸಲ್ಲಿಸಿ ರೇಷ್ಮೆ ಬೆಳೆಗಾರರ ಹಿತ ಕಾಯಲು ಬರ ಅಧ್ಯಯನ ಮತ್ತು ಜನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಒಕ್ಕೂಟದ ಶಿವಕುಮಾರ್, ರಾಮಚಂದ್ರ, ಪುಟ್ಟೇಗೌಡ, ಅಪ್ಪಾಜಿಗೌಡ, ಚನ್ನಪ್ಪ ಹಾಜರಿದ್ದರು.