

ಬೆಂಗಳೂರು: ರಾಜ್ಯ ಸರ್ಕಾರ ಹಾಲಿ ಮುಂಗಾರಿನಲ್ಲಿ 161 ತಾಲ್ಲೂಕುಗಳನ್ನು ತೀವ್ರ ಬರಪೀಡಿತವೆಂದು ಮತ್ತು 34 ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತವೆಂದು ಘೋಷಿಸಿದ್ದು, ಈ ಸಮಯದಲ್ಲಿ ರೈತರಿಗೆ ಬೆಳೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶುಕ್ರವಾರ (ಸೆ.15) ‘ಬರ ನಿರ್ವಹಣೆ: ಸೂಕ್ತ ಕೃಷಿ ತಂತ್ರಜ್ಞಾನಗಳು - ರಾಜ್ಯ ಮಟ್ಟದ ಆನ್‌ಲೈನ್ ತರಬೇತಿ’ ಹಮ್ಮಿಕೊಳ್ಳಲಾಗಿದೆ.
ಪ್ರಸ್ತುತ ಬಿತ್ತನೆ ಪ್ರಮಾಣವು ಶೇ.60ರಷ್ಟಿದ್ದು, ಬಿತ್ತನೆ ಮಾಡಿದ ಪ್ರದೇಶದ ಕೆಲವೆಡೆ ಬರ ಸನ್ನಿವೇಶದಿಂದ ಬೆಳೆ ನಷ್ಟವಾಗಿದೆ. ಇನ್ನುಳಿದ ಪ್ರದೇಶದಲ್ಲೂ ಇದೇ ಸನ್ನಿವೇಶ ಕಂಡುಬಂದಿದ್ದು, ಇವುಗಳನ್ನು ಕೃಷಿ ಸಂಬಂಧಿ ಚಟುವಟಿಕೆಗಳ ಸುಸ್ಥಿರತೆಗಾಗಿ ಉಳಿಸಿಕೊಳ್ಳವುದು ಅವಶ್ಯಕವಾಗಿದೆ. ಈ ವಿಷಮ ಪರಿಸ್ಥಿತಿಯನ್ನು ಮನಗೊಂಡು ಬೆಂಗಳೂರು ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಮೇತಿ ಘಟಕ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಶುಕ್ರವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಆನ್‌ಲೈನ್ ತರಬೇತಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಒಂದೇ ಬಾರಿ 3 ಸಾವಿರ ಕೃಷಿಕರು ಮತ್ತು ವಿಸ್ತರಣಾ ಕಾರ್ಯಕರ್ತರು ಭಾಗವಹಿಸಬಹುದು. ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರು ಕೃಷಿ ವಿವಿಯ ಪ್ರಾಧ್ಯಾಪಕ ಡಾ. ಎಂ.ಎನ್.ತಿಮ್ಮೇಗೌಡ, ರಾಯಚೂರು ವಿವಿಯ ಡಾ. ಬಸವಣ್ಣಪ್ಪ ಮತ್ತು ಧಾರವಾಡ ವಿವಿಯ ಡಾ. ಬಸವರಾಜ ಎಣಗಿ, ಸಹ ಪ್ರಾಧ್ಯಾಪಕರು ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆಯ ಆತ್ಮ ಸಿಬ್ಬಂದಿ ಅಥವಾ ಮೊಬೈಲ್ ಸಂ: 9481425522 / 99646 89340ಗೆ ಸಂಪರ್ಕಿಸಬಹುದು.